×
Ad

ಇಥಿಯೋಪಿಯಾ ಪ್ರಧಾನಿಯಾಗಿ ಅಹ್ಮದ್ ಪ್ರಮಾಣವಚನ ಸ್ವೀಕಾರ

Update: 2021-10-04 21:15 IST

ಅದೀಸ್ ಅಬಾಬ, ಅ.4: ಎರಡನೇ ಅವಧಿಗೆ ಇಥಿಯೋಪಿಯಾದ ಪ್ರಧಾನಿಯಾಗಿ ಅಬಿಯ್ ಅಹ್ಮದ್ ಸೋಮಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶರು ಅಹ್ಮದ್ ಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಇದೇ ಸಂದರ್ಭ ಸಂಸತ್ತಿನ ಕೆಳಮನೆಯ ಸ್ಪೀಕರ್ ಮತ್ತು ಉಪ ಸ್ಪೀಕರ್ ಕೂಡಾ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ವರ್ಷಾರಂಭ ನಡೆದಿದ್ದ ಸಂಸದೀಯ ಚುನಾವಣೆಯಲ್ಲಿ ಅಹ್ಮದ್ ಅವರ ಪ್ರಾಸ್ಪಾರಿಟಿ ಪಕ್ಷ ಗೆದ್ದಿರುವುದಾಗಿ ಘೋಷಿಸಲಾಗಿತ್ತು. ಚುನಾವಣೆಯನ್ನು ವಿಪಕ್ಷಗಳು ಬಹಿಷ್ಕರಿಸಿದ್ದರೂ, ಈ ಹಿಂದಿಗಿಂದ ಈ ಚುನಾವಣೆ ಉತ್ತಮ ರೀತಿಯಲ್ಲಿ ನಡೆದಿದೆ ಎಂದು ಹೊರದೇಶದ ಚುನಾವಣಾ ವೀಕ್ಷಕರು ಅಭಿಪ್ರಾಯಪಟ್ಟಿದ್ದರು. 436 ಸಂಸತ್ ಕ್ಷೇತ್ರಗಳಲ್ಲಿ ಅಹ್ಮದ್ ಅವರ ಪಕ್ಷ 410 ಸ್ಥಾನಗಳಲ್ಲಿ ಗೆದ್ದಿದೆ. ಚುನಾವಣೆ ಮುಂದೂಡಲಾಗಿದ್ದ 3 ಪ್ರಾಂತ್ಯಗಳಲ್ಲಿ ಕಳೆದ ತಿಂಗಳು ಚುನಾವಣೆ ನಡೆದಿದೆ. ಉತ್ತರದ ಟಿಗ್ರೆ ಪ್ರಾಂತ್ಯ ಇಥಿಯೋಪಿಯಾ ಸರಕಾರವನ್ನು ವಿರೋಧಿಸುತ್ತಿರುವ ಪ್ರಾಂತೀಯ ಪಡೆಗಳ ನಿಯಂತ್ರಣದಲ್ಲಿದ್ದು ಅಲ್ಲಿ ಚುನಾವಣೆ ನಡೆದಿಲ್ಲ.

2018ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಅಹ್ಮದ್ ನೆರೆಯ ಎರಿಟ್ರಿಯಾ ದೇಶದೊಂದಿಗೆ ಸಂಬಂಧ ಸುಧಾರಣೆಗೆ ಮತ್ತು ವ್ಯಾಪಕ ರಾಜಕೀಯ ಸುಧಾರಣೆಗೆ ಶ್ರಮಿಸಿದ್ದ ಕಾರಣಕ್ಕೆ 2019ರ ನೋಬೆಲ್ ಪುರಸ್ಕಾರ ಪಡೆದಿದ್ದಾರೆ. ದೇಶದ ಭದ್ರತೆಯನ್ನು ಸುಧಾರಿಸಲು ಪ್ರಧಾನಿ ಆದ್ಯತೆ ನೀಡಬೇಕು ಎಂದು ಜನತೆ ಬಯಸುತ್ತಿರುವುದಾಗಿ ಅಲ್ಜಝೀರಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News