ಮುಂಬೈ ಇಂಡಿಯನ್ಸ್ ಗೆ ಸುಲಭ ತುತ್ತಾದ ರಾಜಸ್ಥಾನ ರಾಯಲ್ಸ್
ಶಾರ್ಜಾ: ವೇಗದ ಬೌಲರ್ ನಥಾನ್ ಕೌಲ್ಟರ್ ನೀಲ್ (4-14) ಅತ್ಯುತ್ತಮ ಬೌಲಿಂಗ್ ಹಾಗೂ ಆರಂಭಿಕ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಅರ್ಧಶತಕದ(ಔಟಾಗದೆ 50, 25 ಎಸೆತ)ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಟೂರ್ನಿಯ 51ನೇ ಪಂದ್ಯದಲ್ಲಿ 8 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.
ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿರುವ ಮುಂಬೈ ಪ್ಲೇ-ಆಫ್ ಸುತ್ತಿಗೇರುವ ವಿಶ್ವಾಸವನ್ನು ಜೀವಂತವಾಗಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 90 ರನ್ ಗಳಿಸಿತ್ತು. ಗೆಲ್ಲಲು ಸುಲಭ ಸವಾಲು ಪಡೆದ ಮುಂಬೈ 8.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತು.
ಮುಂಬೈ ತಂಡ ನಾಯಕ ರೋಹಿತ್ ಶರ್ಮಾ(22) ಹಾಗೂ ಸೂರ್ಯಕುಮಾರ್ ಯಾದವ್(13) ವಿಕೆಟ್ ಬೇಗನೆ ಕಳೆದುಕೊಂಡಿತು. ಇಶಾನ್ ಹಾಗೂ ಹಾರ್ದಿಕ್ ಪಾಂಡ್ಯ(5)ತಂಡವು ಇನ್ನೂ 70 ಎಸೆತ ಬಾಕಿ ಇರುವಾಗಲೇ ಜಯ ಸಾಧಿಸಲು ನೆರವಾದರು. ಮುಸ್ತಫಿಝರ್ರಹ್ಮಾನ್ ಎಸೆತವನ್ನು ಸಿಕ್ಸರ್ ಗೆ ಅಟ್ಟುವುದರೊಂದಿಗೆ ಇಶಾನ್ 50 ರನ್ ಪೂರೈಸಿದರು.