ಐಸಿಸ್ ಆರ್ಥಿಕ ವಿಭಾಗದ ಮುಖ್ಯಸ್ಥನ ಬಂಧನ: ಇರಾಕ್ ಪ್ರಧಾನಿ ಘೋಷಣೆ
Update: 2021-10-11 20:46 IST
ಬಗ್ದಾದ್, ಅ.11: ಅಮೆರಿಕದ ‘ವಾಂಟೆಡ್’ ಪಟ್ಟಿಯಲ್ಲಿದ್ದ ಐಸಿಸ್ ಸಂಘಟನೆಯ ಆರ್ಥಿಕ ವಿಭಾಗದ ಮುಖ್ಯಸ್ಥ ಸಮಿ ಜಸಿಮ್ ಅಲ್ಜಬೂರಿಯನ್ನು ಬಂಧಿಸಲಾಗಿದೆ ಎಂದು ಇರಾಕ್ ಪ್ರಧಾನಿ ಮುಸ್ತಫಾ ಅಲ್ ಕಧೇಮಿ ಸೋಮವಾರ ಘೋಷಿಸಿದ್ದಾರೆ.
ಮೃತಪಟ್ಟಿರುವ ಐಸಿಸ್ ಮುಖಂಡ ಅಬು ಬಕರ್ ಅಲ್ ಬಗ್ದಾದಿಯ ಮಾಜಿ ಸಹಾಯಕ ಎನ್ನಲಾಗಿರುವ ಜಬೂರಿಯನ್ನು ಇರಾಕ್ ಗಡಿಯ ಹೊರವಲಯದಲ್ಲಿ ಸೆರೆಹಿಡಿಯಲಾಗಿದೆ ಎಂದವರು ಟ್ವೀಟ್ ಮಾಡಿದ್ದಾರೆ.
ಜಬೂರಿಯನ್ನು ಬಂಧಿಸಿದವರಿಗೆ 5 ಮಿಲಿಯನ್ ಡಾಲರ್ ಬಹುಮಾನವನ್ನು ಅಮೆರಿಕ ಘೋಷಿಸಿತ್ತು.
ತೈಲ, ನೈಸರ್ಗಿಕ ಅನಿಲ, ಪ್ರಾಚೀನ ವಸ್ತುಗಳು, ಖನಿಜಗಳ ಅಕ್ರಮ ವ್ಯವಹಾರದಿಂದ ಐಸಿಸ್ ಸಂಘಟನೆಗೆ ಹರಿದು ಬರುವ ಆದಾಯ ಮೂಲಗಳ ಮೇಲುಸ್ತುವಾರಿ ನಿರ್ವಹಿಸುತ್ತಿರುವ ಜಬೂರಿ, ಒಂದು ರೀತಿಯಲ್ಲಿ ವಿತ್ತ ಸಚಿವರಂತೆ ಕಾರ್ಯನಿರ್ವಹಿಸುತ್ತಿದ್ದ ಎಂದು ಅಮೆರಿಕ ಹೇಳಿತ್ತು. ಜಬೂರಿಯನ್ನು ಜಾಗತಿಕ ಭಯೋತ್ಪಾದಕ ಎಂದು 2015ರ ಸೆಪ್ಟಂಬರ್ ನಲ್ಲಿ ಅಮೆರಿಕ ಘೋಷಿಸಿದೆ.