ಚೀನಾದಲ್ಲಿ ಬಿಗಡಾಯಿಸಿದ ವಿದ್ಯುತ್ ಕೊರತೆ ಸಮಸ್ಯೆ ಹಲವು ಕೈಗಾರಿಕೆಗಳ ಕಾರ್ಯ ಸ್ಥಗಿತ

Update: 2021-10-11 17:10 GMT

ಬೀಜಿಂಗ್, ಅ.11: ಕಲ್ಲಿದ್ದಲು ಪೂರೈಕೆ ಹೆಚ್ಚಿಸಿ ವಿದ್ಯುತ್ ಬಳಕೆಯನ್ನು ನಿರ್ವಹಿಸಲು ಸರಕಾರ ಪ್ರಯತ್ನ ಮುಂದುವರಿಸಿರುವಂತೆಯೇ, ಸೋಮವಾರದಿಂದ ವಿದ್ಯುತ್ ಅವ್ಯವಸ್ಥೆ ಮತ್ತಷ್ಟು ಹೆಚ್ಚಬಹುದು ಎಂದು ಚೀನಾದ ಬೃಹತ್ ಪ್ರಾಂತವಾಗಿರುವ ಲಿಯೋನಿಂಗ್ ಎಚ್ಚರಿಕೆ ನೀಡಿದೆ. ಕೊರೋನ ಸೋಂಕಿನ ಪ್ರಭಾವ ಕ್ರಮೇಣ ಕಡಿಮೆಯಾಗುತ್ತಿರುವಂತೆಯೇ ವಿಶ್ವದಾದ್ಯಂತ ಕಲ್ಲಿದ್ದಲು ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಮತ್ತು ಪೂರೈಕೆಗೆ ತೊಡಕಾಗಿದೆ.

ಚೀನಾದ ಅರ್ಥವ್ಯವಸ್ಥೆಯಲ್ಲಿ 2ನೇ ಬೃಹತ್ ಪ್ರಾಂತವಾಗಿರುವ ಲಿಯೊನಿಂಗ್ ಸೋಮವಾರ 2ನೇ ಬಾರಿಗೆ ಭಾರೀ ವಿದ್ಯುತ್ ಕಡಿತದ ಎಚ್ಚರಿಕೆ ಸಂದೇಶ ರವಾನಿಸಿದೆ. ಕಳೆದ 2 ವಾರದಲ್ಲಿ ಇದು 5ನೇ ಎಚ್ಚರಿಕೆ ಸಂದೇಶವಾಗಿದ್ದು ವಿದ್ಯುತ್ ಕೊರತೆ5 ಜಿಡಬ್ಲ್ಯೂಗೆ ಏರಬಹುದು ಎಂದಿದೆ.


ಚೀನಾದ ಕೈಗಾರಿಕೆಗಳ ಸಮೂಹ ಹೊಂದಿರುವ 3 ಪ್ರಾಂತಗಳಲ್ಲಿ ಲಿಯೊನಿಂಗ್ನಲ್ಲಿ ಅತ್ಯಧಿಕ ವಿದ್ಯುತ್ ಬಳಕೆಯಾಗುತ್ತಿದೆ. ಲಿಯೊನಿಂಗ್ ಪ್ರಾಂತ ಸೆಪ್ಟಂಬರ್ ಮಧ್ಯಭಾಗದಿಂದ ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿದೆ. ಸೆಪ್ಟಂಬರ್ ತಿಂಗಳ ಅಂತಿಮ 3 ದಿನ ದೈನಂದಿನ ವಿದ್ಯುತ್ ಪೂರೈಕೆಗೆ ತೀವ್ರ ತೊಡಕಾಗಿದ್ದು ಹಲವು ಮನೆಗಳು ವಿದ್ಯುತ್ ಕಡಿತದ ಸಮಸ್ಯೆ ಎದುರಿಸಿವೆ ಮತ್ತು ಕೈಗಾರಿಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಈ ಪ್ರದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್ನ 70%ದಷ್ಟು ಕಲ್ಲಿದ್ದಲನ್ನು ಅವಲಂಬಿಸಿದೆ. 8.2% ಪವನ ವಿದ್ಯುತ್(ಗಾಳಿಯಿಂದ ಉತ್ಪಾದಿಸುವ ವಿದ್ಯುತ್)ನಿಂದ ಲಭಿಸುತ್ತದೆ. ಆದರೆ ಕೊರೋನ ಸಮಸ್ಯೆಯಿಂದ ಕಲ್ಲಿದ್ದಲು ಬೆಲೆ ಗಗನಕ್ಕೇರಿರುವುದು ಕೊರತೆಗೆ ಕಾರಣವಾಗಿದೆ.


ಚೀನಾದ 2 ಬೃಹತ್ ಕಲ್ಲಿದ್ದಲು ಗಣಿಯಲ್ಲಿ ಉತ್ಪಾದನೆಯನ್ನು 200% ಹೆಚ್ಚಿಸುವಂತೆ ಕಳೆದ ವಾರ ಸರಕಾರ ಆದೇಶಿಸಿದೆ. ಆದರೂ ಈ ವರ್ಷ ವಿದ್ಯುತ್ ಪೂರೈಕೆ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News