ಫೆಲೆಸ್ತೀನ್ ದೇಶ ಸ್ಥಾಪನೆಯ ಅಗತ್ಯವನ್ನು ಇಸ್ರೇಲ್ ಕಡೆಗಣಿಸಬಾರದು: ಏಂಜಲಾ ಮರ್ಕೆಲ್

Update: 2021-10-11 17:34 GMT

ಜೆರುಸಲೇಂ, ಅ.11: ಫೆಲೆಸ್ತೀನ್ ದೇಶದ ಸ್ಥಾಪನೆಯ ಅಗತ್ಯವನ್ನು ಇಸ್ರೇಲ್ ಕಡೆಗಣಿಸಬಾರದು ಎಂದು ಜರ್ಮನ್ ಛಾನ್ಸೆಲರ್ ಏಂಜಲಾ ಮರ್ಕೆಲ್ ಸೋಮವಾರ ಒತ್ತಾಯಿಸಿದ್ದಾರೆ.

ಇಸ್ರೇಲ್ ಗೆ 2 ದಿನದ ಭೇಟಿ ನೀಡಿರುವ ಮರ್ಕೆಲ್ ಸೋಮವಾರ ಇಸ್ರೇಲ್‌ನ ಟೆಲ್ಅವೀವ್ನ ‘ಇನ್ಸ್ಟಿಟ್ಯೂಟ್ ಆಫ್ ನ್ಯಾಷನಲ್ ಸೆಕ್ಯುರಿಟಿ ಸ್ಟಡೀಸ್’ನಲ್ಲಿ ಚಿಂತಕರ ವೇದಿಕೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಕಳೆದ ವರ್ಷ ಇಸ್ರೇಲ್ ಮತ್ತು ಯುಎಇ ನೇತೃತ್ವದ 4 ಅರಬ್ ದೇಶಗಳ ನಡುವಿನ ಐತಿಹಾಸಿಕ ಒಪ್ಪಂದವನ್ನು ಶ್ಲಾಘಿಸಿದ ಅವರು, ಆದರೆ ಅಬ್ರಹಾಂ ಒಪ್ಪಂದ ಎಂದು ಹೆಸರಾಗಿರುವ ಈ ಒಪ್ಪಂದವು ಫೆಲೆಸ್ತೀನ್ನೊಂದಿಗೆ ಇಸ್ರೇಲ್ ಶಾಂತಿ ಒಪ್ಪಂದ ಮಾಡಿಕೊಳ್ಳುವ ಅತ್ಯವನ್ನು ಅಳಿಸಿ ಹಾಕದು ಎಂದರು.


ಕಳೆದ 16 ವರ್ಷದಿಂದ ಅಧಿಕಾರದಲ್ಲಿರುವ ಮರ್ಕೆಲ್ ಇಸ್ರೇಲ್ಗೆ ನಿರಂತರ ಬೆಂಬಲ ಸೂಚಿಸುತ್ತಾ ಬಂದಿದ್ದರು. ಆದರೆ ಇದೀಗ ಎರಡು ರಾಷ್ಟ್ರಗಳ ಪರಿಹಾರ ಸೂತ್ರದ ಪರ ಹೇಳಿಕೆ ನೀಡುವುದರೊಂದಿಗೆ ಪ್ರಥಮ ಬಾರಿಗೆ ಇಸ್ರೇಲ್ ಆಡಳಿತಕ್ಕೆ ವಿರುದ್ಧವಾದ ನಿಲುವನ್ನು ಬೆಂಬಲಿಸಿದಂತಾಗಿದೆ.
ಫೆಲೆಸ್ತೀನಿಯರಿಗೆ ಜೀವಿಸುವ ಅವಕಾಶದ ಹಕ್ಕು ಇದೆ ಎಂಬುದನ್ನು ನಾವು ಕಡೆಗಣಿಸುವಂತಿಲ್ಲ. ಆದ್ದರಿಂದ ಯಾವುದೇ ಸಂದರ್ಭದಲ್ಲಿ , ಈಗ ಜನ ವಲಸೆ ಬಂದಿರುವುದರಿಂದ ದಿನೇ ದಿನೇ ಸಂಕೀರ್ಣಗೊಳ್ಳುತ್ತಿದ್ದರೂ, ಎರಡು ರಾಷ್ಟ್ರದ ಸಿದ್ಧಾಂತವನ್ನು ಕಡೆಗಣಿಸುವ ಹಾಗಿಲ್ಲ ಎಂದು ಮರ್ಕೆಲ್ ಹೇಳಿದರು.

ಇಸ್ರೇಲ್ ಆಕ್ರಮಿತ ಪ್ರದೇಶದಲ್ಲಿ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಇಸ್ರೇಲ್‌ನ ನೂತನ ಪ್ರಧಾನಿ ನಫ್ತಾಲಿ ಬೆನೆಟ್, ಪೆಲೆಸ್ತೀನಿಯರೊಂದಿಗೆ ಶಾಂತಿ ಮಾತುಕತೆಯನ್ನು ತಳ್ಳಿಹಾಕಿದ್ದಾರೆ. ಅದರ ಬದಲು ಈ ಪ್ರದೇಶದಲ್ಲಿ ಫೆಲೆಸ್ತೀನಿಯರಿಗೆ ವಾಸಿಸಲು ಹೆಚ್ಚಿನ ಅನುಕೂಲ, ವ್ಯವಸ್ಥೆ ಒದಗಿಸುವುದಾಗಿ ಅವರು ಹೇಳಿದ್ದಾರೆ.
ಫೆಲೆಸ್ತೀನಿಯರಿಗೆ ಜೀವಿಸಲು ಹೆಚ್ಚಿನ ವ್ಯವಸ್ಥೆ ಒದಗಿಸುವ ಹೇಳಿಕೆ ಸ್ವಾಗತಾರ್ಹ. ಆದರೆ ಇದಿಷ್ಟೇ ಸಾಕಾಗದು ಎಂದು ಮರ್ಕೆಲ್ ಪ್ರತಿಕ್ರಿಯಿಸಿದ್ದಾರೆ. 2 ದಿನದ ಭೇಟಿಯುದ್ದಕ್ಕೂ ಮರ್ಕೆಲ್ ರನ್ನು ಇಸ್ರೇಲ್‌ನ ನೈಜ ಸ್ನೇಹಿತೆ ಎಂದೇ ಅಲ್ಲಿನ ಮಾಧ್ಯಮಗಳು ಬಿಂಬಿಸಿವೆ. ಇಸ್ರೇಲ್‌ನ ಭದ್ರತೆಯ ವಿಷಯದಲ್ಲಿ ಜರ್ಮನ್‌ ನ ಬದ್ಧತೆಯನ್ನು ಪುನರುಚ್ಚರಿಸಿರುವ ಅವರು, ಮುಂದಿನ ಚುನಾವಣೆ ಬಳಿಕ ಜರ್ಮನ್ ನಲ್ಲಿ ಅಧಿಕಾರಕ್ಕೆ ಬರಲಿರುವ ಆಡಳಿತವೂ ಇದೇ ನಿಲುವನ್ನು ಮುಂದುವರಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News