ದಕ್ಷಿಣ ಲೆಬನಾನ್: ತೈಲ ಸಂಗ್ರಹಾಗಾರದಲ್ಲಿ ಬೆಂಕಿ ಅನಾಹುತ

Update: 2021-10-11 18:33 GMT

ಬೈರೂತ್, ಅ.11: ದಕ್ಷಿಣ ಲೆಬನಾನ್ ನ ಕರಾವಳಿ ನಗರ ಝಹ್ರಾನಿಯಲ್ಲಿ ಪ್ರಮುಖ ತೈಲಸಂಗ್ರಹಾಗಾರದಲ್ಲಿ ಸೋಮವಾರ ಭಾರೀ ಬೆಂಕಿ ಅನಾಹುತ ಸಂಭವಿಸಿದ್ದು ಆಕಾಶದೆತ್ತರಕ್ಕೆ ಚಾಚಿದ್ದ ಬೆಂಕಿಯ ಕೆನ್ನಾಲಗೆಯ ಜತೆ ಹೊಗೆಯ ಕಪ್ಪು ಮೋಡಗಳು ಪರಿಸರದಲ್ಲಿ ವ್ಯಾಪಿಸಿವೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿವೆ.

ಬೆಂಕಿ ಹತ್ತಿಕೊಂಡ 2 ಗಂಟೆಯ ಬಳಿಕವೂ ಅದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಬೆಂಕಿ ದುರಂತಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಅಗ್ನಿಶಾಮಕ ದಳಗಳ ಕಾರ್ಯಾಚರಣೆ ಮುಂದುವರಿದಿದೆ . ಬೆಂಕಿ ಅನಾಹುತದ ಸಂದರ್ಭ ಇಲ್ಲಿ ಯಾವುದೇ ಕಾರ್ಮಿಕರು ಇರಲಿಲ್ಲ. ಲೆಬನಾನ್ ಸೇನಾಪಡೆ ಝಹ್ರಾನಿಯ ಮೂಲಕ ಹಾದುಹೋಗುವ, ಬೈರೂತ್ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯನ್ನು ತಕ್ಷಣವೇ ಮುಚ್ಚಿದೆ ಎಂದು ವರದಿ ತಿಳಿಸಿದೆ.

ಈ ಸಂಗ್ರಹಾಗಾರದಲ್ಲಿ ಸುಮಾರು 3 ಲಕ್ಷ ಲೀಟರ್‌ಗಳಷ್ಟು ಗ್ಯಾಸೊಲೈನ್ ಇತ್ತು. ಇದರ ಬಳಿ ಇರುವ ಮತ್ತೊಂದು ತೈಲ ಸಂಗ್ರಹಾರಕ್ಕೆ ಬೆಂಕಿ ವ್ಯಾಪಿಸದಂತೆ ಕ್ರಮ ಕೈಗೊಳ್ಳಲಾಗುತಿ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೈರುತ್ ನಿಂದ ಸುಮಾರು 50 ಕಿ.ಮೀ ದಕ್ಷಿಣದಲ್ಲಿರುವ ಝಹ್ರಾನಿ ತೈಲ ಸಂಗ್ರಹಾಗಾರವು ಲೆಬನಾನ್ ನ ಮುಖ್ಯ ವಿದ್ಯುತ್ ಘಟಕದ ಬಳಿಯಿದೆ. ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಘಟಕ 2 ದಿನದ ಹಿಂದೆ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. 

ಲೆಬನಾನ್ ನಲ್ಲಿ ವಿದ್ಯುತ್ ಅವ್ಯವಸ್ಥೆ ತೀವ್ರಗೊಂಡಿದ್ದು ಕೆಲವೊಮ್ಮೆ ದಿನದಲ್ಲಿ 22 ಗಂಟೆಯೂ ವಿದ್ಯುತ್ ಸ್ಥಗಿತಗೊಳ್ಳುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News