ಐಪಿಎಲ್‌ಗೆ ವಿದಾಯ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಹೇಳಿದ್ದೇನು?

Update: 2021-10-16 14:10 GMT
ಎಂ.ಎಸ್. ಧೋನಿ (ಫೋಟೊ : PTI)

ಚೆನ್ನೈ: ಕೊಲ್ಕತ್ತಾ ನೈಟ್ ರೈಡರ್ಸ್‌ ತಂಡವನ್ನು 27 ರನ್‌ಗಳಿಂದ ಸೋಲಿಸಿ ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವಿ ನಾಯಕ ಎಂ.ಎಸ್. ಧೋನಿ ಮುಂದಿನ ಐಪಿಎಲ್‌ನಲ್ಲಿ ಆಡುತ್ತಾರೆಯೇ ಎಂಬ ಕುತೂಹಲ ಮಾತ್ರ ಹಾಗೆಯೇ ಉಳಿದುಕೊಂಡಿದೆ.

ಶುಕ್ರವಾರ ರಾತ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಂದಿನ ವರ್ಷ ಐಪಿಎಲ್ ಟೂರ್ನಿಗೆ ಮರಳುತ್ತೀರೇ ಎಂದು ಧೋನಿಯನ್ನು ಪ್ರಶ್ನಿಸಿದಾಗ, "ನಾನು ಹಿಂದೆ ಹೇಳಿದ್ದನ್ನೇ ಮತ್ತೆ ಹೇಳುತ್ತಿದ್ದೇನೆ. ಅದೆಲ್ಲ ಬಿಸಿಸಿಐಯನ್ನು ಅವಲಂಬಿಸಿದೆ. ಹೊಸ ಎರಡು ತಂಡಗಳ ಆಗಮದ ಹಿನ್ನೆಲೆಯಲ್ಲಿ.. ಸಿ.ಎಸ್.ಕೆ. ಗೆ ಏನು ಒಳ್ಳೆಯದು ಎನ್ನುವುದನ್ನು ನಾವು ನಿರ್ಧರಿಸಬೇಕಾಗುತ್ತದೆ" ಎಂದು ಉತ್ತರಿಸಿದರು.

"ಅಗ್ರ ಮೂರು ಅಥವಾ ನಾಲ್ಕು ಮಂದಿಯಲ್ಲಿ ನಾನು ಇರುತ್ತೇನೆಯೇ ಎನ್ನುವುದು ಮುಖ್ಯವಲ್ಲ; ಫ್ರಾಂಚೈಸಿಗೆ ಯಾವುದೇ ಧಕ್ಕೆಯಾಗದಂತೆ ಪ್ರಮುಖ ಆಟಗಾರರ ಕೋರ್ ರಚಿಸಬೇಕಿದೆ. ಮುಂದಿನ ಹತ್ತು ವರ್ಷಗಳಲ್ಲಿ ಯಾರು ತಂಡಕ್ಕೆ ಕೊಡುಗೆ ನೀಡಬಲ್ಲರು ಎಂಬುದನ್ನು ನೋಡಿ ಕೋರ್‌ ಗ್ರೂಪ್ ರಚಿಸಬೇಕಿದೆ" ಎಂದು ಸ್ಪಷ್ಟಪಡಿಸಿದರು.

ವೇದಿಕೆಯಿಂದ ಹಿಂದಿರುಗುವ ಸಂದರ್ಭದಲ್ಲಿ ಕೂಡಾ ನಿರೂಪಕ ಹರ್ಷ ಭೋಗ್ಲೆ ಮತ್ತೆ ನಿರ್ದಿಷ್ಟ ಉತ್ತರ ಪಡೆಯಲು ಸಾಧ್ಯವಾಗಿಲ್ಲ. ನಿಮ್ಮ ಪರಂಪರೆಯನ್ನು ಬಿಟ್ಟುಹೋಗುತ್ತೀರಾ ಎಂದು ಹೇಳಿದಾಗ ಧೋನಿ, "ನಾನಿನ್ನೂ ಬಿಟ್ಟಿಲ್ಲ" ಎಂದು ಹೇಳುವ ಮೂಲಕ 2022ರ ಐಪಿಎಲ್‌ನಲ್ಲಿ ಸಿಎಸ್‌ಕೆ ನಾಯಕನಾಗಿ ಮುಂದುವರಿಯುವ ಸುಳಿವು ನೀಡಿದರು.

ಸಿಎಸ್‌ಕೆ ಪರ ಆಡುವ ಅಥವಾ ಐಪಿಎಲ್‌ನಲ್ಲಿ ಮುಂದುವರಿಯುವ ಸಾಧ್ಯತೆ ಬಗ್ಗೆ ಕಳೆದ ಕೆಲ ವಾರಗಳಿಂದ ಧೋನಿ ಸ್ಪಷ್ಟ ಸಂದೇಶವನ್ನು ನೀಡಿಲ್ಲ. ಅಭಿಮಾನಿಗಳ ಜತೆಗಿನ ಸಂವಾದವೊಂದರಲ್ಲಿ ಧೋನಿ ಇತ್ತೀಚೆಗೆ "ಅಭಿಮಾನಿಗಳು ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಬೀಳ್ಕೊಡುಗೆ ನೀಡಲು ಅವಕಾಶ ಪಡೆಯಲಿದ್ದಾರೆ" ಎಂದು ಹೇಳುವ ಮೂಲಕ ಮತ್ತೊಂದು ಸೀಸನ್‌ಗೆ ಮುಂದುವರಿಯಲಿದ್ದಾರೆ ಎಂಬ ಸುಳಿವು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News