ಅಫ್ಘಾನ್ ನಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ: ಅಮೆರಿಕ ಘೋಷಣೆ

Update: 2021-10-16 16:35 GMT
photo:PTI

ವಾಷಿಂಗ್ಟನ್, ಅ.16: ಅಫ್ಘಾನಿಸ್ತಾನದಿಂದ ಅಮೆರಿಕದ ಪಡೆಗಳನ್ನು ತೆರವುಗೊಳಿಸುವ ಸಂದರ್ಭ ತಪ್ಪು ಗ್ರಹಿಕೆಯಿಂದ ನಡೆದ ಡ್ರೋನ್ ದಾಳಿಯಲ್ಲಿ ಮೃತರಾದವರ ಸಂಬಂಧಿಕರಿಗೆ ಪರಿಹಾರ ನೀಡುವುದಾಗಿ ಅಮೆರಿಕ ಶುಕ್ರವಾರ ಘೋಷಿಸಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕದ ಪಡೆಗಳನ್ನು ಸ್ಥಳಾಂತರಿಸುವ ಅಂತಿಮ ಹಂತದಲ್ಲಿ ಗೊಂದಲ, ಅವ್ಯವಸ್ಥೆ ಉಂಟಾಗಿತ್ತು. ಈ ಸಂದರ್ಭ ಅಮೆರಿಕದ ನಡೆಸಿದ ಡ್ರೋನ್ ದಾಳಿಯಲ್ಲಿ 7 ಮಕ್ಕಳ ಸಹಿತ 10 ಮಂದಿ ಮೃತಪಟ್ಟಿದ್ದರು. ಮೃತರ ಸಂಬಂಧಿಗಳಿಗೆ ಪರಿಹಾರದ ಜೊತೆಗೆ, ಅಫ್ಘಾನಿಸ್ತಾನದಿಂದ ಹೊರತೆರಳಲು ಬಯಸುವವರಿಗೆ ಬೇರೆಡೆ ನೆಲೆಸಲು ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ವಿದೇಶಾಂಗ ಇಲಾಖೆಯ ಜತೆ ಕಾರ್ಯನಿರ್ವಹಿಸುತ್ತಿರುವುದಾಗಿ ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.

ಗುರುವಾರ ರಕ್ಷಣಾ ಇಲಾಖೆಯ ಕಾರ್ಯನೀತಿ ವಿಭಾಗದ ಅಧೀನ ಕಾರ್ಯದರ್ಶಿ ಕೊಲಿನ್ ಕಹ್ಲ್ ಹಾಗೂ ಅಫ್ಗಾನ್ನಲ್ಲಿ ಸಕ್ರಿಯವಾಗಿರುವ ಅಂತರಾಷ್ಟ್ರೀಯ ನೆರವು ಸಂಘಟನೆ ‘ನ್ಯೂಟ್ರಿಷನ್ ಆ್ಯಂಡ್ ಎಜುಕೇಷನ್ ಇಂಟರ್ನ್ಯಾಷನಲ್ (ಎನ್ಎಇಐ) ಅಧ್ಯಕ್ಷ ಸ್ಟೀವನ್ ಕ್ವೋನ್ ನಡುವೆ ನಡೆದ ಸಭೆಯಲ್ಲಿ ಪರಿಹಾರ ನೀಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಪೆಂಟಗಾನ್(ಅಮೆರಿಕ ರಕ್ಷಣಾ ಇಲಾಖೆಯ ಕೇಂದ್ರಕಚೇರಿ)ಯ ಹೇಳಿಕೆ ತಿಳಿಸಿದೆ. ಎನ್ಎಇಐ ಸಿಬಂದಿ ಎಝ್ಮರಯ್ ಅಹ್ಮದಿ ಎಂಬವರು ಐಸಿಸ್ ಉಗ್ರಸಂಘಟನೆಯ ಸದಸ್ಯ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ನೀಡಿದ್ದ ತಪ್ಪು ಮಾಹಿತಿಯ ಮೇರೆಗೆ ಆಗಸ್ಟ್ 29ರಂದು ಅಹ್ಮದಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಡ್ರೋನ್ ಮೂಲಕ ಕ್ಷಿಪಣಿ ದಾಳಿ ನಡೆಸಿದಾಗ ಅಹ್ಮದಿ, ಅವರ ಪತ್ನಿ, ಮತ್ತೊಬ್ಬ ವ್ಯಕ್ತಿ ಹಾಗೂ 7 ಮಕ್ಕಳ ಸಹಿತ 10 ಮಂದಿ ಪ್ರಾಣ ಕಳೆದುಕೊಂಡಿದ್ದರು. ಕಾಬೂಲ್ನಲ್ಲಿ ಐಸಿಸ್ ಸಂಘಟನೆಯ ಉಗ್ರರು ಸಕ್ರಿಯವಾಗಿರುವ ಪ್ರದೇಶದಲ್ಲಿ ಅಹ್ಮದಿ ಪ್ರಯಾಣಿಸುತ್ತಿದ್ದ ಕಾರು ಪತ್ತೆಯಾದ್ದರಿಂದ ಈ ಪ್ರಮಾದ ನಡೆದಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ವಿಭಾಗದ ಕಮಾಂಡರ್ ಜ ಕೆನ್ನೆತ್ ಮೆಕೆಂಝಿ ಹೇಳಿದ್ದರು. ಡ್ರೋನ್ ದಾಳಿಗೆ ತಪ್ಪು ಮಾಹಿತಿ ಕಾರಣ ಎಂದು ಕಳೆದ ತಿಂಗಳು ಅಮೆರಿಕದ ಅಧಿಕಾರಿಗಳು ಒಪ್ಪಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News