ಬಾಂಗ್ಲಾದೇಶದಲ್ಲಿ ಮುಂದುವರಿದ ಕೋಮು ಹಿಂಸಾಚಾರ: ಇಬ್ಬರು ಹಿಂದೂಗಳ ಹತ್ಯೆ; ಮೃತರ ಸಂಖ್ಯೆ 6ಕ್ಕೆ ಏರಿಕೆ

Update: 2021-10-16 16:45 GMT
photo:twitter.com/@news18dotcom

ಢಾಕಾ, ಅ.16: ಬಾಂಗ್ಲಾದೇಶದಲ್ಲಿ ಶನಿವಾರ ಮತ್ತೆ ಭುಗಿಲೆದ್ದ ಕೋಮು ಹಿಂಸಾಚಾರದಲ್ಲಿ ಇಬ್ಬರು ಹಿಂದು ವ್ಯಕ್ತಿಗಳ ಹತ್ಯೆಯಾಗಿದ್ದು, ಇದರೊಂದಿಗೆ ಬುಧವಾರದಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 6ಕ್ಕೇರಿದೆ ಎಂದು ಪೊಲೀಸರು ಹೇಳಿದ್ದಾರೆ. ದುರ್ಗಾ ಪೂಜಾ ಕಾರ್ಯಕ್ರಮದ ಸಂದರ್ಭ ಹಿಂದು ದೇವತೆಯ ಮೊಣಕಾಲಿನಲ್ಲಿ ಖುರಾನ್ ಗ್ರಂಥ ಇರಿಸಿರುವ ಫೋಟೋ ಆನ್ಲೈನ್ನಲ್ಲಿ ವೈರಲ್ ಆದ ಬಳಿಕ ಬುಧವಾರ ಆರಂಭವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಮುಸ್ಲಿಮರು ಬಹುಸಂಖ್ಯಾತರಾಗಿರುವ ಬಾಂಗ್ಲಾದೇಶದಲ್ಲಿ ಸುಮಾರು 10% ಅಲ್ಪಸಂಖ್ಯಾತ ಸಮುದಾಯದವರಿದ್ದಾರೆ.

ದಕ್ಷಿಣದ ಬೇಗಮ್ಗಂಜ್ ನಗರದಲ್ಲಿ ದುರ್ಗಾಪೂಜೆಯ ಅಂತಿಮ ದಿನವಾದ ಶುಕ್ರವಾರ ದೇವಸ್ಥಾನವೊಂದರಲ್ಲಿ ಹಿಂದು ಸಮುದಾಯದವರು ಪೂಜಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದಾಗ 200ಕ್ಕೂ ಹೆಚ್ಚಿದ್ದ ಪ್ರತಿಭಟನಾಕಾರರ ತಂಡ ದೇವಾಲಯದ ಮೇಲೆ ದಾಳಿ ನಡೆಸಿದ್ದು, ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯನನ್ನು ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣಾ ಮುಖ್ಯಾಧಿಕಾರಿ ಶಾ ಇಮ್ರಾನ್ ವರದಿಗಾರರಿಗೆ ತಿಳಿಸಿದ್ದಾರೆ. 

ಶನಿವಾರ, ದೇವಸ್ಥಾನದ ಬಳಿಯ ಕೆರೆಯಲ್ಲಿ ಮತ್ತೋರ್ವ ಹಿಂದು ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಶಹೀದುಲ್ ಇಸ್ಲಾಮ್ ಹೇಳಿದ್ದಾರೆ. ಬಾಂಗ್ಲಾದೇಶದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಿಂದು ವಿರೋಧಿ ಹಿಂಸಾಚಾರ ಭುಗಿಲೆದ್ದಿದ್ದು ದುರ್ಗಾಪೂಜೆಗೆ ರಚಿಸಿದ್ದ ಕನಿಷ್ಟ 80 ಪೆಂಡಾಲ್ಗಳ ಮೇಲೆ ದಾಳಿ ನಡೆದಿದ್ದು ಹಿಂಸಾಚಾರದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಕನಿಷ್ಟ 150 ಹಿಂದುಗಳು ಗಾಯಗೊಂಡಿದ್ದಾರೆ ಎಂದು ಹಿಂದು ಸಮುದಾಯದ ಮುಖಂಡ ಗೋವಿಂದಚಂದ್ರ ಪ್ರಮಾಣಿಕ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News