ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ
ಹೊಸದಿಲ್ಲಿ, ಅ.17: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳುವಂತೆ ಮಾಜಿ ನಾಯಕ ರಾಹುಲ್ ದ್ರಾವಿಡ್ಮನವೊಲಿಸಿದ ಕೆಲವು ದಿನಗಳ ಬಳಿಕ ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ಕೇವಲ ಔಪಚಾರಿಕವಾಗಿ ಬಿಸಿಸಿಐ ರವಿವಾರ ಮುಖ್ಯ ಕೋಚ್ ಹುದ್ದೆ ಹಾಗೂ ಮೂವರು ಸಹಾಯ ಸಿಬ್ಬಂದಿ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದೆ.
ದುಬೈನಲ್ಲಿ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದ ವೇಳೆ ಬಿಸಿಸಿಐನ ಪ್ರಮುಖ ಅಧಿಕಾರಿಗಳೊಂದಿಗಿನ ಚರ್ಚೆ ವೇಳೆ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳಲು ದ್ರಾವಿಡ್ ಅನೌಪಚಾರಿಕವಾಗಿ ಒಪ್ಪಿಕೊಂಡಿದ್ದಾರೆ. ದ್ರಾವಿಡ್ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯು ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌ಗೆ ಔಪಚಾರಿಕ ಶಿಫಾರಸನ್ನು ಮಾಡಬೇಕಾಗುತ್ತದೆ. ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 26 ಕೊನೆಯ ದಿನವಾಗಿದೆ.
ಈ ಕಾರಣಕ್ಕೆ ಬಿಸಿಸಿಐ 2023ರ ವಿಶ್ವಕಪ್ ತನಕ ಎರಡು ವರ್ಷಗಳ ಅವಧಿಗೆ ಮುಖ್ಯ ಕೋಚ್ ಹುದ್ದೆಯ ಜೊತೆಗೆ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್‌ಗಳಿಗಾಗಿ ಅರ್ಜಿ ಆಹ್ವಾನಿಸಿ ಜಾಹೀರಾತನ್ನು ನೀಡಿದೆ.
ಭಾರತದ ಹಾಲಿ ಮುಖ್ಯ ಕೋಚ್ ರವಿ ಶಾಸ್ತ್ರಿಯವರ ಜೊತೆಗೆ ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಅವರ ಕೋಚ್ ಅವಧಿಯು ಮುಂದಿನ ತಿಂಗಳು ಭಾರತದ ಟ್ವೆಂಟಿ-20 ವಿಶ್ವಕಪ್ ಅಭಿಯಾನದೊಂದಿಗೆ ಮುಕ್ತಾಯವಾಗಲಿದೆ.
ಬ್ಯಾಟಿಂಗ್ ತರಬೇತುದಾರ ವಿಕ್ರಮ್ ರಾಥೋಡ್ 2019ರಿಂದ ಇಲ್ಲಿಯವರೆಗಿನ ಎರಡು ವರ್ಷಗಳ ಕಾಲ ಕೋಚ್ ಹುದ್ದೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಈ ಅವಧಿಯಲ್ಲಿ ತಂಡ ಗಮನಾರ್ಹ ಪ್ರದರ್ಶನ ನೀಡಿತ್ತು ಅವರು ಅರ್ಜಿ ಸಲ್ಲಿಸಿದರೆ ಕೋಚ್ ಆಗಿ ಮುಂದುವರಿಯುವ ನಿರೀಕ್ಷೆ ಇದೆ.
ಭಾರತ ಎ ಹಾಗೂ ಅಂಡರ್-19 ತಂಡದಲ್ಲಿ ಕೋಚ್ ಆಗಿರುವ, ದ್ರಾವಿಡ್ ಅವರ ಆಪ್ತರಾಗಿರುವ ಪರಾಸ್ ಮಾಂಬ್ರೆ ಬೌಲಿಂಗ್ ಕೋಚ್ ಹುದ್ದೆ ಗಿಟ್ಟಿಸಿಕೊಳ್ಳುವ ನಿರೀಕ್ಷೆ ಇದೆ. ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವವರು 30 ಟೆಸ್ಟ್‌ಗಳು ಇಲ್ಲವೇ 50 ಏಕದಿನ ಪಂದ್ಯಗಳನ್ನು ಆಡಿರಬೇಕಾಗುತ್ತದೆ. ಅದರ ಜೊತೆಗೆ ರಾಷ್ಟ್ರೀಯ ತಂಡಕ್ಕೆ ಎರಡು ವರ್ಷ ಇಲ್ಲವೇ ಯಾವುದೇ ಐಪಿಎಲ್ ತಂಡಕ್ಕೆ ಮೂರು ವರ್ಷಗಳ ಕಾಲ ಕೋಚಿಂಗ್ ನೀಡಿರುವ ಅನುಭವವಿರಬೇಕಾಗುತ್ತದೆ.
ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವವರು 10 ಟೆಸ್ಟ್ ಇಲ್ಲವೇ 25 ಏಕದಿನ ಪಂದ್ಯಗಳಲ್ಲಿ ಆಡಿರಬೇಕು ಇಲ್ಲವೇ ಐಪಿಎಲ್ ಅಥವಾ ಎ ತಂಡಗಳೊಂದಿಗೆ 3 ವರ್ಷ ಕೆಲಸ ಮಾಡಿರುವ ಅನುಭವ ಹೊಂದಿರಬೇಕು. ಇತ್ತೀಚೆಗೆ ಆಶೀಶ್ ಕೌಶಿಕ್ ಹುದ್ದೆ ತ್ಯಜಿಸಿರುವ ಕಾರಣ ತೆರವಾಗಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿರುವ ಸ್ಪೋಟ್ಸ್ ಹಾಗೂ ಮೆಡಿಶಿನ್ ಮುಖ್ಯಸ್ಥರ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ.