ಬಾಂಗ್ಲಾ ಹಿಂಸಾಚಾರ: ದುರ್ಗಾ ಪೂಜೆಯ ಪೆಂಡಾಲ್ ನಲ್ಲಿ ಕುರ್‌ಆನ್ ಪ್ರತಿ ಇಟ್ಟ ವ್ಯಕ್ತಿಯ ಗುರುತು ಪತ್ತೆ

Update: 2021-10-21 16:13 GMT

ಢಾಕಾ, ಅ.21: ಬಾಂಗ್ಲಾದೇಶದಲ್ಲಿ ಅಕ್ಟೋಬರ್ 13ರಂದು ಕೊಮಿಲಾ ಜಿಲ್ಲೆಯಲ್ಲಿ ದುರ್ಗಾಪೂಜೆಯ ಪೆಂಡಾಲ್ ನಲ್ಲಿ ಕುರ್‌ಆನ್ ಪ್ರತಿ ಇರಿಸಿದ್ದ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದಾರೆ ಎಂದು ದಿ ಢಾಕಾ ಟ್ರಿಬ್ಯೂನಲ್ ಪತ್ರಿಕೆ ವರದಿ ಮಾಡಿದೆ.

ಕೊಮಿಲಾ ದುರ್ಗಾಪೂಜೆಯ ಪೆಂಡಾಲ್ನಲ್ಲಿರಿಸಿದ್ದ ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ದುಷ್ಕರ್ಮಿಯನ್ನು ಇಕ್ಬಾಲ್ ಹುಸೇನ್ ಎಂದು ಗುರುತಿಸಲಾಗಿದೆ. ಪೆಂಡಾಲ ಒಳಗೆ ಕುರ್‌ಆನ್ ಪ್ರತಿಯನ್ನು ಕೊಂಡೊಯ್ದ ಹುಸೇನ್ ಅದನ್ನು ಒಳಗಿರಿಸಿ ಅಲ್ಲಿ ಹನುಮಾನ್ ವಿಗ್ರಹದ ಕೈಯಲ್ಲಿದ್ದ ಗದೆಯೊಂದಿಗೆ ತೆರಳಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ. ಹುಸೇನ್ನ ನ್ನು ಇನ್ನಷ್ಟೇ ಬಂಧಿಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ದುರ್ಗಾಪೂಜೆಯ ಪೆಂಡಾಲ್ ನಲ್ಲಿ ಕುರ್‌ಆನ್ ಪ್ರತಿ ಇರಿಸಿ ಪವಿತ್ರಗ್ರಂಥವನ್ನು ಅಪವಿತ್ರಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡಿದ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರದಲ್ಲಿ ಇದುವರೆಗೆ 7 ಮಂದಿ ಮೃತಪಟ್ಟಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿ ಕೊಮಿಲಾ ಪೊಲೀಸರು 4 ಪ್ರಕರಣ ದಾಖಲಿಸಿದ್ದು 41 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 4 ಮಂದಿ ಹುಸೇನ್‌ ನ ಸಹಚರರು . ಹುಸೇನ್ ಮಾದಕದೃವ್ಯ ವ್ಯಸನಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

 
10 ವರ್ಷದ ಹಿಂದೆ ನೆರೆಮನೆಯ ವ್ಯಕ್ತಿ ಹುಸೇನ್ ನನ್ನು ಚೂರಿಯಿಂದ ತಿವಿದಿದ್ದು ಅಂದಿನಿಂದ ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ಆತನ ತಾಯಿ ಅಮೀನಾ ಬೇಗಂರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಹುಸೇನ್ ತನ್ನ ಅಡಗುದಾಣವನ್ನು ನಿರಂತರ ಬದಲಾಯಿಸಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಾನೆ. ಆದರೂ ಆತನನ್ನು ಶೀಘ್ರ ಬಂಧಿಸುವ ವಿಶ್ವಾಸವಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದರೆ ಕೊಮಿಲಾ ಘಟನೆಯ ವಾಸ್ತವಾಂಶ ಬೆಳಕಿಗೆ ಬರಲಿದೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಅಸದುರುಮಾನ್ ಖಾನ್ ಕಮಲ್ ಹೇಳಿದ್ದಾರೆ.

ಈ ಮಧ್ಯೆ, ಬಾಂಗ್ಲಾದೇಶದಲ್ಲಿ ನಡೆದ ಕೋಮುಹಿಂಸಾಚಾರದ ಬಗ್ಗೆ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿನ ಅಮೆರಿಕದ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ. ‘ಬಾಂಗ್ಲಾದಲ್ಲಿ ನಡೆದ ಹಿಂದೂ ಸಮುದಾಯದ ವಿರುದ್ಧದ ಹಿಂಸಾಚಾರದಲ್ಲಿ ಹಲವರು ಮೃತರಾಗಿದ್ದು ನೂರಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಹಿಂದೂ ವಿರೋಧಿ ಭಾವನೆಗೆ ಉತ್ತೇಜನ ನೀಡುವ ಉಗ್ರವಾದಿ ಶಕ್ತಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಹಿಂದೂಗಳ ಸಹಿತ ಎಲ್ಲಾ ಧಾರ್ಮಿಕ ಸಮುದಾಯದವರ ಹಕ್ಕು ಮತ್ತು ಭದ್ರತೆಯನ್ನು ರಕ್ಷಿಸಬೇಕು ಮತ್ತು ಈ ಘೋರ ಕೃತ್ಯಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸುವಂತೆ ಬಾಂಗ್ಲಾದೇಶದ ಸರಕಾರವನ್ನು ಆಗ್ರಹಿಸುವುದಾಗಿ ’ ಆಯೋಗದ ಮುಖ್ಯಸ್ಥೆ ನಡೀನ್ ಮೆಯೆಂಝಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News