ನ್ಯೂಝಿಲ್ಯಾಂಡ್: ಗವರ್ನರ್ ಜನರಲ್ ಆಗಿ ಮೂಲ ನಿವಾಸಿ ಮಹಿಳೆ ನೇಮಕ

Update: 2021-10-21 16:30 GMT
photo:twitter/@AP

ವೆಲಿಂಗ್ಟನ್, ಅ.21: ನ್ಯೂಝಿಲ್ಯಾಂಡ್ನ ಗವರ್ನರ್ ಜನರಲ್ ಆಗಿ ಡೇಮ್ ಸಿಂಡಿ ಕಿರೊ ಗುರುವಾರ ದೇಶದ ಸಂಸತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಈ ಪ್ರತಿಷ್ಠಿತ ಹುದ್ದೆಗೇರಿದ ಪ್ರಥಮ ಮೂಲನಿವಾಸಿ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.

ವಲಸಿಗರು ಹಾಗೂ ಕಡೆಗಣಿಸಲ್ಪಟ್ಟ(ತಾರತಮ್ಯಕ್ಕೆ ಒಳಗಾದ) ಪ್ರಜೆಗಳಿಗೆ ನೆರವಾಗುವುದು ತನ್ನ ಮೊದಲ ಆದ್ಯತೆಯಾಗಿರುತ್ತದೆ ಎಂದು ಪ್ರಮಾಣ ವಚನ ಸಂದರ್ಭ ಸಿಂಡಿ ಕಿರೊ ಹೇಳಿದ್ದಾರೆ. ಬ್ರಿಟಿಷ್ ಮತ್ತು ಮವೋರಿ ಸಮುದಾಯದ ಅವಳಿ ಸಂಪ್ರದಾಯದ ಬಗ್ಗೆ ತನಗೆ ಹೆಮ್ಮೆಯಿದೆ ಎಂದವರು ಹೇಳಿದ್ದಾರೆ. ಈ ಹಿಂದೆ ಬ್ರಿಟನ್ನ ವಸಾಹತು ದೇಶವಾಗಿರುವ ನ್ಯೂಝಿಲ್ಯಾಂಡ್ನ ಅಧಿಕೃತ ಮುಖ್ಯಸ್ಥರಾಗಿ ಬ್ರಿಟನ್ ರಾಣಿಯೇ ಮುಂದುವರಿದಿದ್ದು ಅವರ ಪ್ರತಿನಿಧಿಯಾಗಿ ಗವರ್ನರ್ ಜನರಲ್ ಕರ್ತವ್ಯ ನಿರ್ವಹಿಸುತ್ತಾರೆ.

ಜನತೆಯಲ್ಲಿ ಸಂಪರ್ಕದ ಭಾವನೆ ಬೆಳೆದಾಗ, ದೇಶಕ್ಕೆ ಸಂಬಂಧಿಸಿದವರು ತಾವು ಎಂಬ ವಿಶ್ವಾಸ ಮೂಡಿದಾಗ, ನೆಲೆಸಲು ಸ್ಥಳವಿದ್ದಾಗ ಸಮುದಾಯಗಳು ಸ್ಥಿತಿಸ್ಥಾಪಕತ್ವ(ಆಯಾ ಸಂದರ್ಭ, ಸ್ಥಳಗಳಿಗೆ ಹೊಂದಿಕೊಳ್ಳುವ ಸ್ವಭಾವ) ಗುಣ ಬೆಳೆಸಿಕೊಳ್ಳುತ್ತವೆ. ಹೊಸದಾಗಿ ಬರುವ ವಲಸಿಗರು ಹಾಗೂ ಈ ಹಿಂದಿನಿಂದಲೂ ಇರುವ ನಿರಾಶ್ರಿತರನ್ನು ಪರಸ್ಪರ ಸಂಪರ್ಕಿಸುವ ಕಾರ್ಯ ನಡೆಸುತ್ತೇನೆ. ನ್ಯೂಝಿಲ್ಯಾಂಡ್ ದೇಶವನ್ನು ತಮ್ಮ ನಿವಾಸವನ್ನಾಗಿ ಮಾಡಿಕೊಂಡವರು ಕೊಡುಗೆಯಾಗಿ ನೀಡಿದ ವಿವಿಧ ಸಂಸ್ಕತಿ ಮತ್ತು ಧರ್ಮಗಳ ಆಚರಣೆಗೆ ನೆರಾಗಲಿದ್ದೇನೆ ಎಂದವರು ಹೇಳಿದ್ದಾರೆ.
ನ್ಯೂಝಿಲ್ಯಾಂಡ್ ಜನಸಂಖ್ಯೆಯ 17 ಶೇ. ದಷ್ಟಿರುವ ಮವೋರಿ ಸಮುದಾಯ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಇನ್ನೂ ಹಿಂದುಳಿದಿದೆ. ಆರೋಗ್ಯ ಸಮಸ್ಯೆ ಹೆಚ್ಚಿರುವ ಈ ಸಮುದಾಯದ ಹೆಚ್ಚಿನ ಮಕ್ಕಳು ಸರಕಾರದ ಆಶ್ರಯತಾಣದಲ್ಲಿ ನೆಲೆಸಿದ್ದಾರೆ. 2019ರಲ್ಲಿ ಭೂಮಿಯ ಹಕ್ಕು ಮತ್ತು ಸಾಮಾಜಿಕ ನ್ಯಾಯಕ್ಕೆ ಆಗ್ರಹಿಸಿ ಈ ಸಮುದಾಯದ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News