ಫ್ರಾನ್ಸ್: ಭೀಕರ ಚಂಡಮಾರುತ ವಿದ್ಯುತ್, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ

Update: 2021-10-21 17:13 GMT
(ಸಾಂದರ್ಭಿಕ ಚಿತ್ರ):PTI

ಪ್ಯಾರಿಸ್, ಅ.21: ಫ್ರಾನ್ಸ್ ನ ಉತ್ತರಭಾಗದಲ್ಲಿ ಬುಧವಾರ ರಾತ್ರಿ ಬೀಸಿದ ಬಿರುಗಾಳಿ ಸಹಿತ ಚಂಡಮಾರುತದಿಂದ ವಿದ್ಯುತ್ ವ್ಯವಸ್ಥೆಗೆ ಧಕ್ಕೆಯಾಗಿದ್ದು ಸುಮಾರು 2,50,000 ಮನೆಗಳು ಕತ್ತಲೆಯಲ್ಲಿ ಮುಳುಗಿವೆ ಎಂದು ವಿದ್ಯುತ್ ಸ್ಥಾವರದ ನಿರ್ವಾಹಕರು ಹೇಳಿದ್ದಾರೆ.

ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಲು ಸುಮಾರು 3000 ತಂತ್ರಜ್ಞರನ್ನು ಸ್ಥಳಕ್ಕೆ ರವಾನಿಸಲಾಗಿದೆ . ಚಂಡಮಾರುತದ ಭೀತಿ ಇನ್ನೂ ಇರುವುದರಿಂದ ಗುರುವಾರವೂ ದೇಶದ ಹಲವೆಡೆ ಆರೆಂಜ್ ಅಲರ್ಟ್ (ಎರಡನೇ ಅತ್ಯಧಿಕ ಅಪಾಯದ ಸಂಕೇತ) ಜಾರಿಯಲ್ಲಿದೆ ಎಂದು ನಿರ್ವಾಹಕ ಎನೆಡಿಸ್ ಹೇಳಿದ್ದಾರೆ.

ಅರೋರೆ ಎಂದು ಹೆಸರಿಸಲಾಗಿರುವ ಈ ಚಂಡಮಾರುತ ಬುಧವಾರ ಮಧ್ಯಾಹ್ನದಿಂದಲೇ ದೇಶದಲ್ಲಿ ವ್ಯಾಪಕ ನಾಶ, ನಷ್ಟಗಳಿಗೆ ಕಾರಣವಾಗಿದ್ದು ರೈಲು ಸಂಚಾರ, ರಸ್ತೆ ಸಂಚಾರ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ. ಪ್ಯಾರಿಸ್ ನ ಸುತ್ತಮುತ್ತಲಿನ ಇಲೆ-ಡೆ-ಫ್ರಾನ್ಸ್ ವಲಯ, ಉತ್ತರದ ನಾರ್ಮಂಡಿ ಮತ್ತು ಪೂರ್ವದ ಲೊರೈನ್ ವಲಯಗಳು ಅತ್ಯಧಿಕ ಹಾನಿಗೊಳಗಾಗಿವೆ ಎಂದು ಫ್ರಾನ್ಸ್ ನ ಸಾರಿಗೆ ಸಚಿವ ಜೀನ್ ಬಾ್ಯಪ್ಟಿಸ್ಟ್ ಜೆಬಾರಿ ಟ್ವೀಟ್ ಮಾಡಿದ್ದಾರೆ.

ಭೀಕರ ಬಿರುಗಾಳಿಯಿಂದ ಬೃಹತ್ ಮರಗಳು ಬುಡಮೇಲಾಗಿ ಉರುಳಿಬೀಳುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಪಶ್ಚಿಮದ ಬ್ರಿಟಾನಿ ವಲಯದಲ್ಲಿ ಚಂಡಮಾರುತದ ಬಳಿಕ ದಿಢೀರ್ ಪ್ರವಾಹದಿಂದ ಹಲವು ಮನೆಗಳು ನಾಶವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News