ಡೆನ್ಮಾರ್ಕ್ ಓಪನ್: ಸಿಂಧೂ ಕ್ವಾರ್ಟರ್‌ಫೆನಲ್‌ಗೆ

Update: 2021-10-21 18:40 GMT

ಒಡೆನ್ಸ್ (ಡೆನ್ಮಾರ್ಕ್), ಅ. 21: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಪಿ.ವಿ. ಸಿಂಧೂ ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್ ಸೂಪರ್ 1,000 ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಥಾಯ್ಲೆಂಡ್‌ನ ಬೂಸನನ್ ಒಂಗ್‌ಬಮ್ರುಂಗ್‌ಫನ್‌ರನ್ನು 21-16, 12-21, 21-15 ಅಂತರದಲ್ಲಿ ಸೋಲಿಸಿದರು.

ಪಂದ್ಯವು 67 ನಿಮಿಷಗಳ ಕಾಲ ಸಾಗಿತು. ಆಗಸ್ಟ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಳಿಕ ಇದು ಸಿಂಧೂ ಅವರ ಮೊದಲ ಪಂದ್ಯಾವಳಿಯಾಗಿದೆ. ಇದಕ್ಕೂ ಮುನ್ನ ಚೇತರಿಸಿಕೊಳ್ಳುವುದಕ್ಕಾಗಿ ಅವರು ಆಟದಿಂದ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಂಡಿದ್ದರು.

ಸೈನಾ ನೆಹ್ವಾಲ್ ನಿರ್ಗಮನ: ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಬುಧವಾರ ತನ್ನ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಅವರು 20ನೇ ವಿಶ್ವ ರ್ಯಾಂಕಿಂಗ್‌ನ ಜಪಾನ್‌ನ ಅಯಾ ಒಹೊರಿ ವಿರುದ್ಧ 16-21, 14-21 ಗೇಮ್‌ಗಳಿಂದ ಪರಾಭವಗೊಂಡಿದ್ದಾರೆ.

ಮಾಜಿ ಟಾಪ್ 10 ಆಟಗಾರ ಎಚ್.ಎಸ್. ಪ್ರಣೋಯ್ ಕೂಡ ಬುಧವಾರ ಇಂಡೋನೇಶ್ಯದ ಜೊನಾಥನ್ ಕ್ರಿಸ್ಟೀ ವಿರುದ್ಧ 18-21, 19-21 ಅಂತರದಲ್ಲಿ ಸೋತು ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಅದೇ ವೇಳೆ, 2014ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಾರುಪಲ್ಲಿ ಕಶ್ಯಪ್‌ಕೂಡ ಬುಧವಾರ ಹೊರಬಿದ್ದಿದ್ದಾರೆ. ಅವರು ಚೈನೀಸ್ ತೈಪೆಯ ನಾಲ್ಕನೇ ಶ್ರೇಯಾಂಕದ ಚೊವು ಟಿಯನ್ ವಿರುದ್ಧ 0-3ರ ಹಿನ್ನಡೆಯಲ್ಲಿದ್ದಾಗ ನಿವೃತ್ತಿಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News