ಟ್ವೆಂಟಿ-20 ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

Update: 2021-10-23 13:47 GMT

ಅಬುಧಾಬಿ, ಅ.23: ಐಸಿಸಿ ಟ್ವೆಂಟಿ-20 ವಿಶ್ವಕಪ್ ನ ಸೂಪರ್-12 ಹಂತದ ಗ್ರೂಪ್-1 ರ ಕಡಿಮೆ ಮೊತ್ತದ ಹಣಾಹಣಿಯಲ್ಲಿ ಆಸ್ಟ್ರೇಲಿಯ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ಆರಂಭ ಪಡೆದುಕೊಂಡಿದೆ.

ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 119 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ 19.4ನೇ ಓವರ್ ನಲ್ಲಿ 5 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಮಾರ್ಕಸ್ ಸ್ಟೋನಿಸ್(ಔಟಾಗದೆ 24, 16 ಎಸೆತ ) ಹಾಗೂ ಮ್ಯಾಥ್ಯೂ ವೇಡ್(ಔಟಾಗದೆ 15, 10 ಎಸೆತ) ತಂಡಕ್ಕೆ ಇನ್ನೂ ಎರಡು ಎಸೆತ ಬಾಕಿ ಇರುವಾಗಲೇ ರೋಚಕ ಗೆಲುವು ತಂದುಕೊಟ್ಟರು. ದ. ಆಫ್ರಿಕಾದ ಪರ ಅನ್ರಿಚ್ ನೋಟ್ಜೆ(2-21) ಯಶಸ್ವಿ ಬೌಲರ್ ಎನಿಸಿಕೊಂಡರು. ರಬಾಡ(1-28), ಕೇಶವ್ ಮಹಾರಾಜ್(1-23) ಹಾಗೂ ಶಂಸಿ(1-22)ತಲಾ ಒಂದು ವಿಕೆಟ್ ಪಡೆದರು.

ಗೆಲ್ಲಲು ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯದ ಆರಂಭವೂ ಉತ್ತಮವಾಗಿರಲಿಲ್ಲ. ಡೇವಿಡ್ ವಾರ್ನರ್ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ಆ್ಯರೊನ್ ಫಿಂಚ್(0)ಖಾತೆ ತೆರೆಯಲು ವಿಫಲರಾದರು. ವಾರ್ನರ್(14), ಮಿಚೆಲ್ ಮಾರ್ಷ್(11),ಗ್ಲೆನ್ ಮ್ಯಾಕ್ಸ್ ವೆಲ್(18) ದೊಡ್ಡ ಮೊತ್ತ ಗಳಿಸಲಿಲ್ಲ. ಮಾಜಿ ನಾಯಕ ಸ್ಟೀವ್ ಸ್ಮಿತ್(35, 34 ಎಸೆತ, 3 ಬೌಂಡರಿ)ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರು. ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು.

ಟಾಸ್ ಜಯಿಸಿದ ಆಸ್ಟ್ರೇಲಿಯ ತಂಡ ದ.ಆಫ್ರಿಕಾ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿತು. ಜೋಶ್ ಹೇಝಲ್ ವುಡ್ (2-19) ನೇತೃತ್ವದ ಆಸ್ಟ್ರೇಲಿಯ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಆಫ್ರಿಕಾ  20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸೀಸ್ ಪರವಾಗಿ ಮಿಚೆಲ್ ಸ್ಟಾರ್ಕ್(2-32), ಝಾಂಪ(2-21) ತಲಾ ಎರಡು ವಿಕೆಟ್ ಪಡೆದರು.

ದ.ಆಫ್ರಿಕಾದ ಪರವಾಗಿ ಏಡೆನ್ ಮರ್ಕರಮ್(40, 36 ಎಸೆತ, 3 ಬೌಂಡರಿ, 1 ಸಿ.)ಸರ್ವಾಧಿಕ ಸ್ಕೋರ್ ಗಳಿಸಿದರು. ಕಾಗಿಸೊ ರಬಾಡ(ಔಟಾಗದೆ 19) ಹಾಗೂ ಡೇವಿಡ್ ಮಿಲ್ಲರ್(16)ಎರಡಂಕೆಯ ಸ್ಕೋರ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News