ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಹುದ್ದೆಗೆ ಗೆಬ್ರೆಯೇಸಸ್ ಏಕೈಕ ಅಭ್ಯರ್ಥಿ

Update: 2021-10-29 18:24 GMT

ಜಿನೆವಾ, ಅ.29: ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರ ಹುದ್ದೆಗೆ ಅರ್ಜಿ ಸಲ್ಲಿಸುವ ಗಡುವು ಮುಗಿದಿದ್ದು ಹಾಲಿ ಅಧ್ಯಕ್ಷ ಟೆಡ್ರಾಸ್ ಗೆಬ್ರೆಯೇಸಸ್ ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಈಗಿನ ಅಧ್ಯಕ್ಷ ಗೆಬ್ರೆಯೇಸಸ್ ಅವರ ಕಾರ್ಯಾವಧಿ ಮುಂದಿನ ವರ್ಷದ ಆಗಸ್ಟ್ನಲ್ಲಿ ಮುಕ್ತಾಯವಾಗಲಿದ್ದು ಅವರು ಮತ್ತೊಂದು ಅವಧಿಗೆ ಅರ್ಜಿ ಸಲ್ಲಿಸಿದ್ದಾರೆ. 

ಇಥಿಯೋಪಿಯಾದ ಮಾಜಿ ಆರೋಗ್ಯ ಹಾಗೂ ವಿದೇಶಾಂಗ ಇಲಾಖೆಯ ಸಚಿವರಾಗಿದ್ದ ಗೆಬ್ರೆಯೇಸಸ್ 2017ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಮುಂದಿನ ಅವಧಿಗೂ ಅವರನ್ನೇ ಮುಖ್ಯಸ್ಥರನ್ನಾಗಿ ಮುಂದುವರಿಸಲು ಫ್ರಾನ್ಸ್, ಜರ್ಮನಿ, ಇಂಡೋನೇಶ್ಯಾ, ನೆದರ್ಲ್ಯಾಂಡ್, ಸ್ಪೇನ್ ಸಹಿತ 28 ದೇಶಗಳು ಬೆಂಬಲ ಸೂಚಿಸಿವೆ.

ಸೆಪ್ಟಂಬರ್ 23 ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವಾಗಿದೆ. ಸದಸ್ಯ ದೇಶಗಳು ಅಭ್ಯರ್ಥಿಯ ಹೆಸರನ್ನು ಸೂಚಿಸಿದ ಪತ್ರವನ್ನು ಸೀಲ್ ಮಾಡಲಾದ ಕವರ್ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದ್ದು ಅದನ್ನು ಅಕ್ಟೋಬರ್ 1ರಂದು ತೆರೆದು ನೋಡಿದಾಗ ಗೆಬ್ರೆಯೇಸಸ್ ಅವರಿಗೆ 28 ದೇಶಗಳ ಬೆಂಬಲ ಲಭಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ಕೊರೋನ ಸೋಂಕಿನ ನಿರ್ವಹಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಜನಪ್ರಿಯರಾಗಿದ್ದ ಗೆಬ್ರಯೇಸಸ್ ಕಾರ್ಯಾವಧಿ ಮುಂದಿನ ಅವಧಿಗೆ ವಿಸ್ತರಣೆಗೆ ಅವರ ಸ್ವದೇಶ ಇಥಿಯೋಪಿಯಾ ಪ್ರಸ್ತಾವನೆ ಸಲ್ಲಿಸದಿರುವುದು ಗಮನಾರ್ಹವಾಗಿದೆ. ಇಥಿಯೋಪಿಯಾದ ಟಿಗ್ರೆಯಲ್ಲಿ ಪ್ರತಿಭಟನಾಕಾರರನ್ನು ಬಲಪ್ರಯೋಗಿಸಿ ಹತ್ತಿಕ್ಕಿದ ಸರಕಾರದ ಕ್ರಮವನ್ನು ಗೆಬ್ರೆಯೇಸಸ್ ಖಂಡಿಸಿ ತಮ್ಮ ದೇಶದ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಮುಂದಿನ ವರ್ಷದ ಮೇ ತಿಂಗಳಿನಲ್ಲಿ ನಡೆಯುವ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ನಡೆಯುವ ಅಧಿಕೃತ ಮತದಾನದಲ್ಲಿ ಸದಸ್ಯ ದೇಶಗಳು ಸೀಲ್ ಮಾಡಲಾದ ಕವರ್ನಲ್ಲಿ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾಗಿ ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರನ್ನು ಸೂಚಿಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News