ಮುಹಮ್ಮದ್ ಶಮಿಯನ್ನು ಗುರಿ ಮಾಡಿದ ಸೋಷಿಯಲ್ ಮೀಡಿಯಾ ಟ್ರೋಲ್‌ಗಳ ವಿರುದ್ಧ ವಿರಾಟ್ ಕೊಹ್ಲಿ ಆಕ್ರೋಶ

Update: 2021-10-30 16:23 GMT

ದುಬೈ: ಪಾಕಿಸ್ತಾನ ವಿರುದ್ಧ ಭಾರತ ವಿಶ್ವಕಪ್ ನ ಸೂಪರ್-12ರ ಪಂದ್ಯ ಸೋತ ನಂತರ ವೇಗದ ಬೌಲರ್ ಮುಹಮ್ಮದ್ ಶಮಿ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ನಿಂದನೆಗೆ ಗುರಿಪಡಿಸಿದ ಟ್ರೋಲ್‌ಗಳಿಗೆ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ. ಧರ್ಮದ ಆಧಾರ ಮೇಲೆ ಯಾರನ್ನಾದರೂ ವೈಯಕ್ತಿವಾಗಿ ಗುರಿ ಮಾಡುವುದು ‘ಅತ್ಯಂತ ಹೀನ ಕೃತ್ಯ’ ಎಂದು ಅವರು ಹೇಳಿದ್ದಾರೆ.

ರವಿವಾರ ದುಬೈನಲ್ಲಿ ನಡೆದ ಟ್ವೆಂಟಿ- 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತವು 10 ವಿಕೆಟ್‌ಗಳ ಸೋಲಿನ ನಂತರ ಸಾಮಾಜಿಕ ಮಾಧ್ಯಮದಲ್ಲಿ ವೇಗಿ ಮುಹಮ್ಮದ್ ಶಮಿಯನ್ನು ಗುರಿಯಾಗಿಸಿಕೊಂಡ ಟ್ರೋಲ್‌ಗಳಿಗೆ ತಂಡದ ನಾಯಕ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ.

"ಯಾರನ್ನಾದರೂ ಅವರ ಧರ್ಮದ ಆಧಾರದ ಮೇಲೆ ಆಕ್ರಮಣ ಮಾಡುವುದು ಒಬ್ಬ ಮನುಷ್ಯ ಮಾಡಬಹುದಾದ ಅತ್ಯಂತ ಹೀನ ಕೃತ್ಯ. ಮತ ಅತ್ಯಂತ ಪವಿತ್ರ ಮತ್ತು ವೈಯಕ್ತಿಕ ವಿಷಯವಾಗಿದೆ. ಜನರು ತಮ್ಮ ಹತಾಶೆಯನ್ನು ಹೊರಹಾಕುತ್ತಾರೆ. ಏಕೆಂದರೆ ನಾವು ಏನು ಮಾಡುತ್ತೇವೆ ಎಂಬುದರ ಬಗ್ಗೆ ಅವರಿಗೆ ತಿಳುವಳಿಕೆ ಇಲ್ಲ" ಎಂದು ಕೊಹ್ಲಿ ಶನಿವಾರ ನ್ಯೂಝಿಲ್ಯಾಂಡ್ ವಿರುದ್ಧದ ಸೂಪರ್ 12 ಮುಖಾಮುಖಿಯ ಮುನ್ನಾದಿನದಂದು ಪತ್ರಿಕಾಗೋಷ್ಠಿಯಲ್ಲಿ  ಸುದ್ದಿಗಾರರಿಗೆ ತಿಳಿಸಿದರು.

"ನಾವಿಲ್ಲಿ ಕ್ರೀಡಾಂಗಣದಲ್ಲಿ ಆಡುತ್ತಿದ್ದೇವೆ. ನಾವು ಸೋಷಿಯಲ್ ಮೀಡಿಯಾದಲ್ಲಿರುವ ಬೆನ್ನು ಮೂಳೆಯಿಲ್ಲದ ಜನಗಳಲ್ಲ. ಕೆಲವರಿಗೆ ಇದೊಂದು ಮನರಂಜನೆ ಆಗಿಬಿಟ್ಟಿರುವುದು ಅತ್ಯಂತ ಖೇದಕರ. ಹೊರಗೆ ನಡೆಯುವ ಈ ಎಲ್ಲ ನಾಟಕ ಕೆಲವರ ಹತಾಶೆಯ ಫಲ. 
ನಾವು 200% ಶಮಿ ಪರ ಇದ್ದೇವೆ. ನಮ್ಮ ತಂಡದೊಳಗಿನ ಸೋದರತ್ವವನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ" ಎಂದು ಕೊಹ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News