ಲೆಬನಾನ್‌ನ ರಾಯಭಾರಿ ಉಚ್ಚಾಟಿಸಿದ ಸೌದಿ ಅರೆಬಿಯಾ, ಬಹ್ರೇನ್

Update: 2021-10-30 17:05 GMT
photo:twitter/
@AJEnglish

ಬೈರೂತ್, ಅ.30: ಯೆಮನ್‌ನಲ್ಲಿ ಸೌದಿ ಅರೆಬಿಯಾ ನೇತೃತ್ವದ ಮೈತ್ರಿ ಪಡೆಗಳು ನಡೆಸುತ್ತಿರುವ ಯುದ್ಧದ ಬಗ್ಗೆ ಲೆಬನಾನ್‌ನ ಸಚಿವರೊಬ್ಬರು ಟೀಕಿಸಿರುವ ವೀಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಲೆಬನಾನ್‌ನಿಂದ ಆಮದು ವ್ಯವಹಾರ ನಿಷೇಧಿಸಿರುವ ಸೌದಿ ಅರೆಬಿಯಾ, 48 ಗಂಟೆಯೊಳಗೆ ದೇಶ ಬಿಟ್ಟು ತೆರಳುವಂತೆ ಲೆಬನಾನ್‌ನ ರಾಯಭಾರಿಗೆ ಸೂಚಿಸಿದೆ ಎಂದು ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಎಸ್‌ಪಿಎ ವರದಿ ಮಾಡಿದೆ. ಅಲ್ಲದೆ ತನ್ನ ಪ್ರಜೆಗಳು ಲೆಬನಾನ್‌ಗೆ ತೆರಳುವುದನ್ನು ನಿಷೇಧಿಸಿದ್ದು ಲೆಬನಾನ್‌ನಿಂದ ರಾಯಭಾರಿಯನ್ನು ವಾಪಾಸು ಕರೆಸಿಕೊಳ್ಳಲಾಗಿದೆ. ಲೆಬನಾನ್‌ನ ಅಧಿಕಾರಿಗಳು ವಾಸ್ತವವನ್ನು ಕಡೆಗಣಿಸಿರುವುದರಿಂದ ಮತ್ತು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿರುವುದರಿಂದ ಆ ದೇಶದೊಂದಿಗಿನ ಸಂಬಂಧದಲ್ಲಿ ಉಂಟಾದ ಬದಲಾವಣೆ ಬಗ್ಗೆ ಸೌದಿ ಸರಕಾರ ವಿಷಾದಿಸುತ್ತದೆ ಎಂದು ಎಸ್‌ಪಿಎ ಸುದ್ಧಿಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೆಲ ಗಂಟೆಗಳ ಬಳಿಕ, ಬಹ್ರೇನ್ ಕೂಡಾ ಲೆಬನಾನ್‌ನ ರಾಯಭಾರಿಗೆ 48 ಗಂಟೆಯೊಳಗೆ ದೇಶ ಬಿಟ್ಟು ತೆರಳುವ ಸೂಚನೆ ನೀಡಿದೆ ಎಂದು ಬಹ್ರೇನ್‌ನ ವಿದೇಶ ವ್ಯವಹಾರ ಇಲಾಖೆ ಹೇಳಿದೆ.

ಲೆಬನಾನ್- ಸೌದಿ ನಡುವಿನ ದ್ವಿಪಕ್ಷೀಯ ಸಂಬಂಧ ಈಗಾಗಲೇ ಹಳಸಿದೆ. ಈ ಮಧ್ಯೆ, ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ ಲೆಬನಾನ್‌ನ ಮಾಹಿತಿ ಸಚಿವ ಜಾರ್ಜ್ ಕೊರ್ಡಹಿ ಯೆಮನ್‌ನಲ್ಲಿ ಹೌದಿ ಬಂಡುಕೋರರ ವಿರುದ್ಧ ಸೌದಿ ಅರೆಬಿಯ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವನ್ನು ಟೀಕಿಸಿದ್ದರು. ಇರಾನ್ ಬೆಂಬಲಿತ ಹೌದಿಗಳು ಬಾಹ್ಯ ಆಕ್ರಮಣದಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಸುದೀರ್ಘಾವಧಿಯಿಂದ ನಡೆಯುತ್ತಿರುವ ಯುದ್ಧವು ನಿಷ್ಪ್ರಯೋಜಕವಾಗಿದ್ದು ಇದನ್ನು ತಕ್ಷಣ ಮುಕ್ತಾಯಗೊಳಿಸಬೇಕು ಎಂದವರು ಹೇಳಿದ್ದರು.

ಈ ವೀಡಿಯೊ ವೈರಲ್ ಆದ ಬೆನ್ನಲ್ಲೇ ಮೈತ್ರಿಪಡೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಲೆಬನಾನ್ ಸಚಿವರ ಹೇಳಿಕೆಯ ಹಿಂದೆ ಇರಾನ್ ಬೆಂಬಲಿತ ಹಝ್‌ಬುಲ್ಲಾ ಸಂಘಟನೆಯ ಪ್ರೇರಣೆಯಿದೆ ಎಂದು ಸೌದಿ ಅರೆಬಿಯಾ ಟೀಕಿಸಿತ್ತು. ಯೆಮೆನ್‌ನಲ್ಲಿ ಹೌದಿ ಬಂಡುಕೋರರಿಗೆ ನೆರವಾಗುತ್ತಿರುವ ಹಝ್‌ಬುಲ್ಲಾ ಸಂಘಟನೆ, ಲೆಬನಾನ್ ಸಚಿವರ ಹೇಳಿಕೆಯನ್ನು ಸ್ವಾಗತಿಸಿತ್ತು.

ಬಳಿಕ ಪ್ರತಿಕ್ರಿಯಿಸಿದ್ದ ಕೊರ್ಡಹಿ, ಇದು ತನ್ನ ವೈಯಕ್ತಿಕ ಹೇಳಿಕೆಯಾಗಿದ್ದು ಸಚಿವನಾಗಿ ನೇಮಕಗೊಳ್ಳುವ ಮೊದಲು ನೀಡಿದ ಹೇಳಿಕೆಯಾಗಿದೆ ಎಂದಿದ್ದರು.

ಕೊರ್ಡಹಿಯ ಹೇಳಿಕೆಯನ್ನು ತಿರಸ್ಕರಿಸಿದ್ದ ಲೆಬನಾನ್ ಪ್ರಧಾನಿ ಮಿಕಾತಿ ಮತ್ತು ಅಧ್ಯಕ್ಷ ಮೈಕಲ್ ಆನ್, ಈ ಹೇಳಿಕೆ ಸರಕಾರದ ನಿಲುವನ್ನು ವ್ಯಕ್ತಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೌದಿ ಅರೆಬಿಯಾ ಕೈಗೊಂಡಿರುವ ಕ್ರಮ ವಿಷಾದನೀಯವಾಗಿದೆ. ಅರಬ್ ಒಗ್ಗಟ್ಟನ್ನು ಸಂರಕ್ಷಿಸುವ ನಿಟ್ಟಿನಲ್ಲಿ, ಈಗಿನ ಬಿಕ್ಕಟ್ಟಿನ ನಿವಾರಣೆಗೆ ಸೋದರ ಅರಬ್ ಮುಖಂಡರು ನೆರವಾಗಬೇಕಬೇಕೆಂದು ವಿನಂತಿಸುವುದಾಗಿ ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News