'ಭವಿಷ್ಯವನ್ನು ದೇವರು ನಿರ್ಧರಿಸುತ್ತಾರೆ':ಫೆಬ್ರವರಿಯಲ್ಲಿ ಕ್ರಿಕೆಟಿಗೆ ಮರಳುವ ಸೂಚನೆ ನೀಡಿದ ಯುವರಾಜ್
ಹೊಸದಿಲ್ಲಿ: ಭಾರತದ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು 2019 ಜೂನ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯನ್ನು ಘೋಷಿಸಿ ಕ್ರಿಕೆಟ್ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದ್ದರು. ಎಡಗೈ ಬ್ಯಾಟ್ಸ್‌ಮನ್ ಸೀಮಿತ ಓವರ್ ಗಳ ಕ್ರಿಕೆಟ್‌ನಲ್ಲಿ ಅಗ್ರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟವರು. ಆ ಸಮಯದಲ್ಲಿ ಅವರು ತಂಡದಲ್ಲಿ ಒಮ್ಮೆ ಸ್ಥಾನ ಪಡೆದರೆ ಮತ್ತೊಮ್ಮೆ ಹೊರಗುಳಿಯುತ್ತಿದ್ದರು. ಯುವರಾಜ್ ಮತ್ತೆ ಕ್ರಿಕೆಟ್ ನಲ್ಲಿ ತನ್ನ ಛಾಪು ಮೂಡಿಸಿ ತನ್ನದೇ ಶೈಲಿಯಲ್ಲಿ ನಿವೃತ್ತಿ ಘೋಷಿಸುತ್ತಾರೆಂದು ಎಲ್ಲರೂ ನಂಬಿದ್ದರು.
ಆದರೆ ದುರದೃಷ್ಟವಶಾತ್, ಭಾರತದ ನೀಲಿ ಜರ್ಸಿಯಲ್ಲಿ ಯುವರಾಜ್ ವಿದಾಯದ ಪಂದ್ಯವನ್ನಾಡುವುದನ್ನು ನೋಡಲು ಅಭಿಮಾನಿಗಳಿಗೆ ಸಾಧ್ಯವಾಗಲಿಲ್ಲ. ದಿಢೀರನೆ ಅವರು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಿಂದ ಅನುಮತಿ ಪಡೆದ ನಂತರ ವಿಶ್ವದಾದ್ಯಂತ ಟ್ವೆಂಟಿ-20 ಲೀಗ್‌ಗಳಲ್ಲಿ ಸ್ಪರ್ಧಿಸಿದ್ದರು. ಅವರು ಈ ವರ್ಷ ರೋಡ್ ಸೇಫ್ಟಿ ಟಿ 20 ಸರಣಿಯಲ್ಲಿ ತಮ್ಮ ಅಪಾಯಕಾರಿ ಕೌಶಲ್ಯಗಳನ್ನು ಪ್ರದರ್ಶಿಸಿದ್ದರು.
ಆದರೆ ಇದೀಗ, ಯುವರಾಜ್ ಸಿಂಗ್ ಮತ್ತೊಮ್ಮೆ ಕ್ರಿಕೆಟ್‌ಗೆ ಮರಳಲು ಸಿದ್ಧವಾಗುತ್ತಿರುವಂತೆ ಕಾಣುತ್ತಿದೆ.
ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ತಡರಾತ್ರಿ ಮಾಡಿರುವ ಪೋಸ್ಟ್ ವೊಂದರಲ್ಲಿ, 39ರ ವಯಸ್ಸಿನ ಯುವರಾಜ್ ಮುಂದಿನ ವರ್ಷ ಫೆಬ್ರವರಿಯಲ್ಲಿ ಕ್ರಿಕೆಟ್‌ಗೆ ಮರಳಬಹುದು ಎಂದು ಸುಳಿವು ನೀಡಿದ್ದಾರೆ.
"ದೇವರು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತಾರೆ ! ಸಾರ್ವಜನಿಕರ ಬೇಡಿಕೆಯ ಮೇರೆಗೆ ನಾನು ಫೆಬ್ರವರಿಯಲ್ಲಿ ಆಶಾದಾಯಕವಾಗಿ ಪಿಚ್‌ಗೆ ಹಿಂತಿರುಗುತ್ತೇನೆ! ನಿಮ್ಮ ಪ್ರೀತಿ ಹಾಗೂ ಶುಭಾಶಯಗಳಿಗೆ ಧನ್ಯವಾದಗಳು ನನಗೆ ತುಂಬಾ ಅರ್ಥವಾಗಿದೆ! ಬೆಂಬಲಿಸುತ್ತಲೇ ಇರಿ . ಇದು ನಮ್ಮ ತಂಡ ಹಾಗೂ ನಿಜವಾದ ಅಭಿಮಾನಿ ಕಷ್ಟದ ಸಮಯದಲ್ಲಿ ತನ್ನ ಬೆಂಬಲವನ್ನು ತೋರಿಸುತ್ತಾನೆ ”ಎಂದು ಅವರು ಹೇಳಿದರು.
ಯುವರಾಜ್ ಭಾರತಕ್ಕಾಗಿ ಅಥವಾ ಟ್ವೆಂಟಿ- 20 ಲೀಗ್‌ಗಳಲ್ಲಿ ಆಡಲು ಮರಳುತ್ತಾರೆಯೇ ಎಂಬುದು ಅಸ್ಪಷ್ಟವಾಗಿದ್ದರೂ ಕ್ರಿಕೆಟ್ ಪಿಚ್‌ನಲ್ಲಿ ಸ್ಟಾರ್ ಬ್ಯಾಟ್ಸ್‌ಮನ್‌ನನ್ನು ಮತ್ತೊಮ್ಮೆ ನೋಡಲು ಅಭಿಮಾನಿಗಳು ಇನ್ನೂ ಉತ್ಸುಕರಾಗಿದ್ದಾರೆ.