ಯುರೋಪ್‌ಗೆ ಮತ್ತೆ ಕೋವಿಡ್ 19 ಸಂಕಷ್ಟ: ಸತತ 5 ವಾರಗಳಿಂದ ಸೋಂಕಿನ ಪ್ರಕರಣಗಳಲ್ಲಿ ಏರಿಕೆ

Update: 2021-11-03 16:55 GMT
photo:AP

ಜಿನೇವಾ,ನ.3: ಸತತ ಐದನೇ ವಾರವೂ ಯುರೋಪ್‌ನಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಕೋವಿಡ್ 19 ಸೋಂಕಿನ ಪ್ರಕರಣಗಳ ಉಲ್ಬಣವಾಗುತ್ತಿರುವ ಜಗತ್ತಿನ ಏಕೈಕ ಪ್ರಾಂತವೆಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

 ಹಿಂದಿನ ವಾರಕ್ಕೆ ಹೋಲಿಸಿದರೆ ಯುರೋಪ್‌ನಲ್ಲಿ ಕೋವಿಡ್19ನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇ.6ರಷ್ಟು ಅಥವಾ 30 ಲಕ್ಷ ಏರಿಕೆಯಾಗಿದೆಯೆಂದು ವರದಿ ಹೇಳಿದೆ. ಆದರೆ ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಕೋವಿಡ್19 ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇ.12ರಷ್ಟು ಇಳಿಕೆಯಾಗಿದೆ ಹಾಗೂ ಆಗ್ನೇಯ ಏಶ್ಯ ಮತ್ತು ಆಫ್ರಿಕಾದಲ್ಲಿ ಕೋರೋನ ಪ್ರಕರಣಗಳ ಸಂಖ್ಯೆಯಲ್ಲಿ ಶೇ.9ರಷ್ಟು ಇಳಿಕೆಯಾಗಿದೆ. ಜಗತ್ತಿನಾದ್ಯಂತ ಕೋವಿಡ್19ನಿಂದ ಸಾವನ್ನಪ್ಪಿರುವವರ ಸಂಖ್ಯೆಯಲ್ಲಿ ಶೇ.8ರಷ್ಟು ಹೆಚ್ಚಳವಾಗಿದೆ.ಜಗತ್ತಿನಾದ್ಯಂತದ ಕೋವಿಡ್19 ನಿಂದ ಸಾವು ಸಂಭವಿಸಿದ ಪ್ರಕರಣಗಳಲ್ಲಿ ಶೇ.50ರಷ್ಟು ಆಗ್ನೇಯ ಏಶ್ಯದಲ್ಲೇ ಏರಿಕೆಯಾಗಿದೆ.

ಆದರೆ ಕೋರೋನ ಸೋಂಕಿನ ಪ್ರಮಾಣವು ಯುರೋಪ್‌ನಲ್ಲಿ ಗರಿಷ್ಠವಾಗಿದ್ದು, ಅಲ್ಲಿ ಪ್ರತಿ 1 ಲಕ್ಷ ಮಂದಿಯ ಪೈಕಿ 192 ಮಂದಿಯಲ್ಲಿ ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಅಮೆರಿಕ ಆನಂತರದ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಪ್ರತಿ ಒಂದು ಲಕ್ಷ ಮಂದಿಗೆ 72 ಹೊಸ ಪ್ರಕರಣಗಳು ವರದಿಯಾಗುತ್ತಿವೆ.

ಝೆಕ್ ಗಣರಾಜ್ಯ, ಪೋಲ್ಯಾಂಡ್, ಮಧ್ಯ ಹಾಗೂ ಪೂರ್ವ ಯುರೋಪ್‌ನಲ್ಲಿರುವ ಇತರ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ.

ಈ ಮಧ್ಯೆ ಕೊರೋನ ಸೋಂಕಿನ ಪ್ರಕರಣಗಳಲ್ಲಿ ಮತ್ತೆ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಜನರು ಮಾಸ್ಕ್ ಧಾರಣೆ ಹಾಗೂ ಸುರಕ್ಷಿತ ಅಂತರ ಪಾಲನೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಬ್ರಿಟನ್‌ನ ವೈದ್ಯಕೀಯ ಅಧಿಕಾರಿಗಳು ಬ್ರಿಟಿಶ್ ಸರಕಾರವನ್ನು ಆಗ್ರಹಿಸಿದ್ದಾರೆ. ಆದರೆ ಕೊರೋನ ಸೋಂಕಿನ ಹೆಚ್ಚಳವನ್ನು ನಿಯಂತ್ರಿಸಲು ದೇಶದ ಆರೋಗ್ಯ ವ್ಯವಸ್ತೆ ಸಮರ್ಥವಾಗಿದೆಯೆಂದು ಬ್ರಿಟಿಶ್ ಸರಕಾರ ಭರವಸೆ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News