ಇಂಗಾಲ ಹೊರಸೂಸುವಿಕೆ ಪ್ರಮಾಣ ಮತ್ತೆ ಹೆಚ್ಚಳ: ಅಧ್ಯಯನ ವರದಿಯಲ್ಲಿ ಉಲ್ಲೇಖ

Update: 2021-11-04 15:22 GMT
ಸಾಂದರ್ಭಿಕ ಚಿತ್ರ:PTI

ಇಂಗ್ಲೆಂಡ್, ನ.3: ಜಾಗತಿಕ ಇಂಗಾಲ ಹೊರಸೂಸುವಿಕೆಯ ಪ್ರಮಾಣ(ಸಿಒ2) ಕಳೆದ ವರ್ಷ ಕನಿಷ್ಟ ಮಟ್ಟಕ್ಕೆ ಇಳಿದಿದ್ದರೂ ವಿಶ್ವದಾದ್ಯಂತ ಆರ್ಥಿಕ ಚಟುವಟಿಕೆ ಮತ್ತೆ ವೇಗ ಪಡೆದುಕೊಂಡಿರುವುದರಿಂದ ಮತ್ತೆ ಕೊರೋನ ಸಾಂಕ್ರಾಮಿಕದ ಪೂರ್ವದ ಅವಧಿಯ ಮಟ್ಟಕ್ಕೆ ಏರುವ ಸಾಧ್ಯತೆಯಿದೆ ಎಂದು ಗುರುವಾರ ಪ್ರಕಟವಾದ ಅಧ್ಯಯನ ವರದಿಯೊಂದು ಹೇಳಿದೆ.

ಕಲ್ಲಿದ್ದಲು ಮತ್ತು ಇಂಧನ ಅನಿಲ ಆಧರಿತ ಇಂಧನ ಸ್ಥಾವರಗಳಿಂದ ಬಿಡುಗಡೆಗೊಳ್ಳುವ ಇಂಗಾಲದ ಪ್ರಮಾಣ ಹೆಚ್ಚಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಬ್ರಿಟನ್‌ನ ಎಕ್ಸೆಟರ್ ವಿವಿಯ ಸಂಶೋಧಕರು ನಡೆಸಿದ ‘ಜಾಗತಿಕ ಇಂಗಾಲ ಯೋಜನೆ’ ಕುರಿತ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೊರೋನ ಸಾಂಕ್ರಾಮಿಕದ ಅವಧಿಯಲ್ಲಿ ಇಳಿಮುಖವಾದ ಬಳಿಕ ಇಂಗಾಲ ಹೊರಸೂಸುವಿಕೆ ಪ್ರಮಾಣ ಏರಿಕೆಯಾಗಲಿದೆ ಎಂಬ ನಿರೀಕ್ಷೆಯಿತ್ತು.

ಆದರೆ ಈ ಹೆಚ್ಚಳ ನಿರೀಕ್ಷಿಸಿದ್ದಕ್ಕಿಂತಲೂ ಭಾರೀ ಏರಿಕೆಯಾಗಿದೆ. ಇಂಗಾಲ ಹೊರಸೂಸುವಿಕೆ ಪ್ರಮಾಣ ಪುಟಿದೇಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸಿಯೇ ಇರಲಿಲ್ಲ ಎಂದು ಅಧ್ಯಯನ ತಂಡದ ಮುಖ್ಯಸ್ಥ ಪಿಯರೆ ಫ್ರಿಡ್ಲಿಂಗ್‌ಸ್ಟನ್ ಹೇಳಿದ್ದಾರೆ.

ಕೊರೋನ ಸೋಂಕಿನ ಸಂದರ್ಭ ಕಲ್ಲಿದ್ದಲು, ತೈಲ ಮತ್ತು ಇಂಧನ ಅನಿಲ ಹೊರಸೂಸುವಿಕೆಯ ಪ್ರಮಾಣ ಇಳಿಕೆಯಾಗಿತ್ತು. ಆದರೆ 2019 ಮತ್ತು 2021ರ ನಡುವೆ ಇಂಧನ ಅನಿಲ ಹೊರಸೂಸುವಿಕೆ ಪ್ರಮಾಣದಲ್ಲಿ 2% ಮತ್ತು ಕಲ್ಲಿದ್ದಲು ಹೊರಸೂಸುವಿಕೆ ಪ್ರಮಾಣದಲ್ಲಿ 1% ಹೆಚ್ಚಳವಾಗಿದೆ. 2021ರಲ್ಲಿ ವಿಶ್ವದಾದ್ಯಂತ 36.4 ಬಿಲಿಯನ್ ಮೆಟ್ರಿಕ್ ಟನ್‌ನಷ್ಟು ಕಾರ್ಬನ್ ಡಯಾಕ್ಸೈಡ್ ವಾತಾವರಣಕ್ಕೆ ಸೇರಲಿದೆ, 2 ವರ್ಷದ ಹಿಂದೆ ಈ ಪ್ರಮಾಣ 36.7 ಬಿಲಿಯನ್ ಮೆಟ್ರಿಕ್ ಟನ್ ಆಗಿತ್ತು ಎಂದು ಅಧ್ಯಯನ ವರದಿ ಅಂದಾಜಿಸಿದೆ.

ವಿಶ್ವದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆ ಗರಿಷ್ಟ ಪ್ರಮಾಣದಲ್ಲಿರುವ ದೇಶಗಳ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ ಭಾರತ 3ನೇ ಸ್ಥಾನದಲ್ಲಿದೆ. ಈ ಎರಡೂ ದೇಶಗಳಲ್ಲಿ 2019ಕ್ಕೆ ಹೋಲಿಸಿದರೆ 2021ರಲ್ಲಿ ಇಂಗಾಲ ಹೊರಸೂಸುವಿಕೆ ಪ್ರಮಾಣ ಹೆಚ್ಚಬಹುದು. ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಸ್ವಲ್ಪಮಟ್ಟಿನ ಇಳಿಕೆ ದಾಖಲಾಗಬಹುದು ಎಂದು ವರದಿ ತಿಳಿಸಿದೆ.

ಚೀನಾಕ್ಕೆ ಅಗ್ರಸ್ಥಾನ ಜಾಗತಿಕವಾಗಿ ಕಲ್ಲಿದ್ದಲು ಮತ್ತು ಇಂಧನ ಅನಿಲದಿಂದ ಇಂಗಾಲ ಹೊರಸೂಸುವಿಕೆಯ ಪ್ರಮಾಣ ಚೀನಾದಲ್ಲಿ ಅತ್ಯಧಿಕವಾಗಿದೆ. ಚೀನಾವು ವಿದ್ಯುತ್ ಉತ್ಪಾದಿಸಲು ಕಲ್ಲಿದ್ದಲನ್ನು ಅತೀ ಹೆಚ್ಚು ಅವಲಂಬಿಸಿರುವುದು ಇದಕ್ಕೆ ಕಾರಣ ಎಂದು ಅಧ್ಯಯನ ವರದಿ ಉಲ್ಲೇಖಿಸಿದೆ. ಚೀನಾವು ಈಗಿನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿರುವುದರಿಂದ ಅತ್ಯಧಿಕ ಪ್ರಮಾಣದ ಇಂಗಾಲ ಹೊರಸೂಸುವ ದೇಶವಾಗಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ಸಂಧಾನಕಾರ ಮತ್ತು ಚೀನಾಕ್ಕೆ ವಿಶ್ವಸಂಸ್ಥೆಯ ವಿಶೇಷ ಹವಾಮಾನ ರಾಯಭಾರಿಯಾಗಿರುವ ಕ್ಸೀ ಝೆನ್‌ಹುವಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News