ಸಿಒಪಿ26 ಸಮಾವೇಶದ ಘೋಷಣೆಗೆ 190 ದೇಶಗಳ ಸಹಿ ಕಲ್ಲಿದ್ದಲಿನ ಯುಗಾಂತ್ಯದ ನಿರೀಕ್ಷೆ : ಬ್ರಿಟನ್
ಗ್ಲಾಸ್ಗೋ, ನ.3: ಇದೇ ಮೊದಲ ಬಾರಿಗೆ ಪೋಲಂಡ್, ವಿಯೆಟ್ನಾಮ್, ಚಿಲಿ ಹಾಗೂ ಇತರ ದೇಶಗಳು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಹಂತಹಂತವಾಗಿ ಅಂತ್ಯಗೊಳಿಸಲು ಹಾಗೂ ನೂತನ ವಿದ್ಯುತ್ ಸ್ಥಾವರ ನಿರ್ಮಾಣ ಕೈಬಿಡಲು ವಾಗ್ದಾನ ಮಾಡುವುದರೊಂದಿಗೆ, ಕಲ್ಲಿದ್ದಲಿನ ಅಂತ್ಯದ ಬಗ್ಗೆ ನಿರೀಕ್ಷೆ ಮೂಡಿದೆ ಎಂದು ಬ್ರಿಟನ್ ಸರಕಾರ ಹೇಳಿದೆ.
ಕಲ್ಲಿದ್ದಲಿನ ಭವಿಷ್ಯಕ್ಕೆ ಬೀಗಮುದ್ರೆ ಜಡಿಯಲು ಸನ್ನದ್ಧರಾಗುವ ಮೂಲಕ ಮತ್ತು ಶುದ್ಧ ಇಂಧನದಿಂದ ಸಶಕ್ತಗೊಂಡ ಭವಿಷ್ಯದ ಪರಿಸರೀಯ ಮತ್ತು ಆರ್ಥಿಕ ಪ್ರಯೋಜನವನ್ನು ಪಡೆಯುವ ನಿಟ್ಟಿನಲ್ಲಿ ವಿಶ್ವವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಬ್ರಿಟನ್‌ನ ವ್ಯವಹಾರ ಮತ್ತು ಇಂಧನ ಕಾಯದರ್ರ್ಶಿ ಕ್ವಾಸಿ ಕ್ವರ್ಟೆಂಗ್ ಹೇಳಿದ್ದಾರೆ.
190 ದೇಶಗಳು ಹಾಗೂ ಸಂಘಟನೆಗಳು ಕಲ್ಲಿದ್ದಲು ಬಳಕೆಯನ್ನು ತ್ಯಜಿಸಲು ನಿರ್ಧರಿಸಿವೆ ಎಂದು ಬ್ರಿಟನ್‌ನ ಆಶ್ರಯದಲ್ಲಿ ಗ್ಲಾಸ್ಗೋದಲ್ಲಿ ನಡೆದ ಸಿಒಪಿ26 ಸಮಾವೇಶದ ಹೇಳಿಕೆ ತಿಳಿಸಿದೆ. ಕಲ್ಲಿದ್ದಲು ಇಂಧನ ಉತ್ಪಾದನೆಗೆ ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಹೊಸ ಹೂಡಿಕೆಯನ್ನು ಅಂತ್ಯಗೊಳಿಸಲು ಹಾಗೂ ಶುದ್ಧ ಇಂಧನ ಉತ್ಪಾದನೆಯನ್ನು ತ್ವರಿತಗೊಳಿಸಲು ಸಿಒಪಿ26 ಒಪ್ಪಂದಕ್ಕೆ ಸಹಿಹಾಕಿದ ದೇಶಗಳು ಬದ್ಧವಾಗಿವೆ ಎಣದಯ ಬ್ರಿಟನ್ ಸರಕಾರ ಹೇಳಿದೆ.
ಕಲ್ಲಿದ್ದಲು ಅತ್ಯಧಿಕ ಪರಿಸರ ಮಾಲಿನ್ಯದ ಖನಿಜ ಇಂಧನವಾಗಿದ್ದು ಇದನ್ನು ಸುಡುವುದರಿಂದ ಹೊರಸೂಸುವ ಹಸಿರುಮನೆ ಅನಿಲವು ಪರಿಸರ ಬದಲಾವಣೆ ಪ್ರಕ್ರಿಯೆಗೆ ಅತೀ ಹೆಚ್ಚಿನ ಕೊಡುಗೆ ನೀಡುತ್ತದೆ. ಕಲ್ಲಿದ್ದಲು ಮುಕ್ತ ವಿಶ್ವ ನಿರ್ಮಾಣಕ್ಕೆ ಜಾಗತಿಕ ರಾಷ್ಟ್ರಗಳ ಒಪ್ಪಿಗೆ ಈ ಸಮಾವೇಶದ ಅತ್ಯಂತ ಪ್ರಮುಖ ಸಾಧನೆಯಾಗಿದ್ದರೆ, ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಶಿಯಸ್‌ಗೆ ಮಿತಿಗೊಳಿಸುವ ಸಹಿತ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
2019ರಲ್ಲಿ ವಿಶ್ವದ 37% ಪ್ರಮಾಣದ ವಿದ್ಯುತ್‌ಶಕ್ತಿ ಉತ್ಪಾದನೆಗೆ ಕಲ್ಲಿದ್ದಲಿನ ಬಳಕೆಯಾಗಿದೆ. ದಕ್ಷಿಣ ಆಫ್ರಿಕಾ, ಪೋಲಂಡ್ ಮತ್ತು ಭಾರತದಲ್ಲಿ ಕಲ್ಲಿದ್ದಲು ಸ್ಥಳೀಯವಾಗಿ ಹೇರಳವಾಗಿ ಲಭ್ಯವಿರುವ, ಅಗ್ಗದ ಇಂಧನ ಮೂಲವಾಗಿರುವುದರಿಂದ ವಿದ್ಯುತ್‌ಶಕ್ತಿ ಉತ್ಪಾದನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಇದೀಗ ಈ ರಾಷ್ಟ್ರಗಳು ತಮ್ಮ ಇಂಧನ ಕ್ಷೇತ್ರವನ್ನು ಶುದ್ಧ ಇಂಧನ ಉತ್ಪಾದನೆ ಪ್ರಕ್ರಿಯೆಗೆ ಬದಲಾಯಿಸಲು ಬೃಹತ್ ಪ್ರಮಾಣದ ಹೂಡಿಕೆ ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಕಲ್ಲಿದ್ದಲು ಯೋಜನೆಗಾಗಿ ಜಾಗತಿಕ ಪೈಪ್‌ಲೈನ್ ಅಳವಡಿಸುವ ಪ್ರಕ್ರಿಯೆ ಇಳಿಮುಖಗೊಂಡಿದ್ದರೂ ಚೀನಾ, ಭಾರತ, ವಿಯೆಟ್ನಾಮ್ ಮತ್ತು ಇಂಡೋನೇಶ್ಯಾಗಳು ಹೊಸ ಕಲ್ಲಿದ್ದಲು ಸ್ಥಾವರ ನಿರ್ಮಿಸುವ ಯೋಜನೆ ರೂಪಿಸಿವೆ.
ಸಿಒಪಿ26ರ ಕಲ್ಲಿದ್ದಲು ತ್ಯಜಿಸುವ ವಾಗ್ದಾನಕ್ಕೆ ಸಹಿ ಹಾಕಿರುವ ದೇಶಗಳಲ್ಲಿ ಈ ದೇಶಗಳೂ ಇವೆಯೇ ಎಂಬುದನ್ನು ಬ್ರಿಟನ್ ದೃಢಪಡಿಸಿಲ್ಲ. ಸಾಗರೋತ್ತರ ಕಲ್ಲಿದ್ದಲು ಸ್ಥಾವರಕ್ಕೆ ಅನುದಾನ ನೀಡುವುದನ್ನು ನಿಲ್ಲಿಸುವುದಾಗಿ ಸೆಪ್ಟಂಬರ್‌ನಲ್ಲಿ ಚೀನಾ ವಾಗ್ದಾನ ನೀಡಿತ್ತು. ಆದರೆ ದೇಶೀಯ ಕಲ್ಲಿದ್ದಲು ಸ್ಥಾವರದ ಬಗ್ಗೆ ಸೊಲ್ಲೆತ್ತಿರಲಿಲ್ಲ.
ದುರದೃಷ್ಟವಶಾತ್, ಆಸ್ಟ್ರೇಲಿಯಾ ಸರಕಾರವೂ ಕಲ್ಲಿದ್ದಲು ಉದ್ದಿಮೆಯನ್ನು ವಿಸ್ತರಿಸುತ್ತಿದೆ. 25 ವರ್ಷದ ಜೀವಿತಾವಧಿಯ ಹೊಸ ಕಲ್ಲಿದ್ದಲು ಗಣಿಯನ್ನು ಆರಂಭಿಸಲಾಗಿದೆ. ಇದರ ಕಾರ್ಯ ಮುಂದುವರಿದರೆ, ಪ್ಯಾರಿಸ್ ಹವಾಮಾನ ಒಪ್ಪಂದದ ಉದ್ದೇಶ ಈಡೇರದು ಎಂದು ಆಸ್ಟ್ರೇಲಿಯಾ ನ್ಯಾಷನಲ್ ವಿವಿಯ ಪರಿಸರ ತಜ್ಞ ವಿಲ್ ಸ್ಟೀಫನ್ ಹೇಳಿದ್ದಾರೆ.