"ಫೇಸ್ಬುಕ್‌ ನಮ್ಮ ʼಮೆಟಾʼ ಹೆಸರು, ಬದುಕನ್ನು ಕಸಿದಿದೆ": ಚಿಕಾಗೋ ಮೂಲದ ಕಂಪೆನಿ ಆರೋಪ

Update: 2021-11-07 13:59 GMT

ಚಿಕಾಗೊ: ತನ್ನ ಸಂಸ್ಥೆಗಳ ಹೆಸರನ್ನು ಮೆಟಾ ಎಂದು ಇತ್ತೀಚೆಗೆ ಬದಲಾಯಿಸಿದ್ದ ಫೇಸ್‌ ಬುಕ್‌ ಸಂಸ್ಥೆಯ ವಿರುದ್ಧ ಹೆಸರುಗಳ್ಳತನದ ಆರೋಪವನ್ನು ಚಿಕಾಗೋ ಮೂಲದ ಕಂಪೆನಿ ಹೊರಿಸಿದೆ. ಸಾಮಾಜಿಕ ತಾಣಗಳಲ್ಲಿ ಈ ಕುರಿತು ಮೆಟಾ ಕಂಪೆನಿಯು ತನ್ನ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಪೋಸ್ಟ್‌ ವೈರಲ್‌ ಆಗಿದೆ. 

“ಕಳೆದ ಮೂರು ತಿಂಗಳಿನಿಂದ, ಫೇಸ್‌ಬುಕ್ ವಕೀಲರು ನಮ್ಮ ಹೆಸರನ್ನು ಅವರಿಗೆ ಮಾರಾಟ ಮಾಡುವಂತೆ ನಮ್ಮನ್ನು ಬೇಟೆಯಾಡುತ್ತಿದ್ದಾರೆ. ಅನೇಕ ಅಧಾರಗಳ ಮೇಲೆ ಅವರ ಪ್ರಸ್ತಾಪವನ್ನು ನಾವು ನಿರಾಕರಿಸಿದ್ದೇವೆ. ಅವರು ಹೇಳುವ ಮೊತ್ತವು ನಮ್ಮ ಹೆಸರು ಬದಲಾವಣೆಯ ವೆಚ್ಚವನ್ನು ಒಳಗೊಂಡಿಲ್ಲ. ಜೊತೆಗೆ ಅವರ ಉದ್ದೇಶವನ್ನು ತಿಳಿದುಕೊಳ್ಳಲು ನಾವು ಒತ್ತಾಯಿಸಿದ್ದೆವು. ಆದರೆ ಅವರು ಅದನ್ನು ಬಹಿರಂಗಪಡಿಸಲು ಉದ್ದೇಶಿಸಿಲ್ಲ" ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಫೇಸ್ಬುಕ್‌ ನಮ್ಮ ಹೆಸರು ಮತ್ತು ಬದುಕನ್ನು ಕಸಿದುಕೊಂಡಿದೆ ಎಂಬ ಶೀರ್ಷಿಕೆಯಲ್ಲಿ ಪತ್ರ ಬಿಡುಗಡೆ ಮಾಡಲಾಗಿದೆ. ಮೆಟಾ ಕಂಪೆನಿಯ ಸಂಸ್ಥಾಪಕ ನೇಟ್‌ ಸ್ಕುಲಿಕ್‌ ಮುಂದುವರಿದು ತಮ್ಮ ಹೇಳಿಕೆಯಲ್ಲಿ " ಅಕ್ಟೋಬರ್‌ ೨೦, ೨೦೨೧ರಂದು ಫೇಸ್ಬುಕ್‌ ನ ವಕೀಲರು ಮಾಡಿದ್ದ ಫೋನ್‌ ಕರೆಯಲ್ಲಿ ಅವರು ನೀಡಿದ ಕೊಡುಗೆಯನ್ನು ನಾವು ನಿರಾಕರಿಸಿದ್ದೇವೆ ಹಾಗೂ ನಮ್ಮ ಅವಶ್ಯಕತೆಗಳ ಕುರಿತು ತಿಳಿಸಿದ್ದೇವೆ. ಈ ವೇಳೆ ಈ ಕರೆಯು ಫೇಸ್ಬುಕ್‌ ನಿಂದ ಬಂದಿದೆ ಎಂದು ಗುರುತಿಸಿದ್ದೇವೆ. ಫೇಸ್‌ಬುಕ್ ಅನ್ನು ಪ್ರತಿನಿಧಿಸುವ ವಕೀಲರು ನಮ್ಮ ಅಸ್ತಿತ್ವದಲ್ಲಿರುವ ಹಕ್ಕು ಮತ್ತು ನೋಂದಣಿಯನ್ನು ಗೌರವಿಸುವುದಾಗಿ ಘೋಷಿಸಿದರು. ಆದರೆ ಇದೀಗ ಫೇಸ್ಬುಕ್‌ ತಮ್ಮ ಹೆಸರನ್ನು ಅನಧಿಕೃತವಾಗಿ ಬದಲಾಯಿಸಿದೆ" ಎಂದು ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News