ಅಫ್ಘಾನ್ ನಲ್ಲಿ ಪೋಲಿಯೊ ಲಸಿಕೀಕರಣ ಅಭಿಯಾನಕ್ಕೆ ಚಾಲನೆ

Update: 2021-11-08 15:24 GMT
ಸಾಂದರ್ಭಿಕ ಚಿತ್ರ

ಕಾಬೂಲ್, ನ.8: ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ(ಯುನಿಸೆಫ್)ಯ ನೇತೃತ್ವದಲ್ಲಿ ಅಫ್ಘಾನಿಸ್ತಾನದಲ್ಲಿ ಪೋಲಿಯೊ ಲಸಿಕೀಕರಣ ಅಭಿಯಾನಕ್ಕೆ ಸೋಮವಾರ ಚಾಲನೆ ದೊರೆತಿದೆ. ಈ ಅಭಿಯಾನಕ್ಕೆ ತಾಲಿಬಾನ್ ಸಂಪೂರ್ಣ ಸಹಕಾರ ಘೋಷಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಫ್ಘಾನಿಸ್ತಾದ ವಿವಿಧೆಡೆ ಸೋಮವಾರ ಈ ಅಭಿಯಾನಕ್ಕೆ ಚಾಲನೆ ದೊರಕಿದೆ. ಆದರೆ ತರಬೇತಿ ಪಡೆದ ಸಿಬಂದಿಗಳ ಕೊರತೆಯಿದೆ . ಆದ್ದರಿಂದ ಆರಂಭಿಕ ಹಂತದಲ್ಲಿ ಕಾಬೂಲ್‌ನಂತಹ ಸ್ಥಳಗಳಲ್ಲಿ ಪೂರ್ಣಪ್ರಮಾಣದಲ್ಲಿ ನಡೆಯಲಿದೆ . ತರಬೇತಿ ಪಡೆದ ಸಿಬಂದಿಗಳು ಲಭಿಸಿದ ಬಳಿಕ ದೂರದ ಪ್ರದೇಶಗಳಲ್ಲೂ ಮುಂದುವರಿಯಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪೋಲಿಯೊ ಕಾರ್ಯಕ್ರಮದ ತುರ್ತು ನಿರ್ವಹಣೆ ವಿಭಾಗದ ಸಂಯೋಜಕ ನಾಕ್ವಾಲಿ ಶಾ ಮೊಮಿಮ್ರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
 
ದೇಶದ 3 ಮಿಲಿಯನ್ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದ್ದು ಈ ಅಭಿಯಾನಕ್ಕೆ ಸಹಕಾರ ನೀಡುವುದಾಗಿ ತಾಲಿಬಾನ್ ಹೇಳಿರುವುದರಿಂದ ಈ ಹಿಂದೆ ತಲುಪಲು ಅಸಾಧ್ಯವಾಗಿದ್ದ ಪ್ರದೇಶವನ್ನೂ ತಲುಪಲು ಸಾಧ್ಯವಾಗಲಿದೆ. ದೇಶದಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಿಸಲು ಹಾಗೂ ಪೋಲಿಯೊ ಕಾಯಿಲೆ ಮತ್ತೊಮ್ಮೆ ಉಲ್ಬಣಿಸುವುದನ್ನು ತಡೆಯಲು ಲಸಿಕೀಕರಣ ಕಾರ್ಯ ಆರಂಭಿಸಲು ತಾಲಿಬಾನ್ ಮುಖಂಡರು ಕೋರಿದ್ದಾರೆ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪೂರ್ವ ಮೆಡಿಟರೇನಿಯನ್ ವಿಭಾಗದ ಪ್ರಾದೇಶಿಕ ನಿರ್ದೇಶಕ ಅಹ್ಮದ್ ಅಲ್ ಮಂಧರಿ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಆರಂಭಿಸಲಾದ ದೀರ್ಘಾವಧಿಯ ಲಸಿಕೀಕರಣ ಅಭಿಯಾನದಿಂದಾಗಿ ಪೋಲಿಯೊ ರೋಗ ವಿಶ್ವದಲ್ಲಿ ಬಹುತೇಕ ನಿರ್ಮೂಲಗೊಂಡಿತ್ತು. ಆದರೆ ಸಾಮೂಹಿಕ ವಲಸೆ ಹಾಗೂ ಕೆಲವು ಪ್ರದೇಶಗಳನ್ನು ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾ ಹಾಗೂ ಪಾಕಿಸ್ತಾನದ ಕೆಲವು ಭಾಗದಲ್ಲಿ ಪೋಲಿಯೊ ರೋಗದ ಸಮಸ್ಯೆ ಮತ್ತೆ ಕಾಣಿಸಿಕೊಂಡಿದೆ. 2020ರಲ್ಲಿ ಅಫ್ಘಾನಿಸ್ತಾದಲ್ಲಿ 56 ಪೋಲಿಯೊ ಪ್ರಕರಣ ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News