ಜಿನ್‌ಪಿಂಗ್ ಅವಧಿ ವಿಸ್ತರಣೆ ಅಧಿಕೃತಗೊಳಿಸುವ ಉದ್ದೇಶ ಚೀನಾ ಕಮ್ಯುನಿಸ್ಟ್ ಪಕ್ಷದ ಸಮಾವೇಶಕ್ಕೆ ಚಾಲನೆ
ಬೀಜಿಂಗ್, ನ.8: ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ)ದ ನಾಲ್ಕು ದಿನಗಳಾವಧಿಯ ಸಮಾವೇಶಕ್ಕೆ ಸೋಮವಾರ ರಾಜಧಾನಿ ಬೀಜಿಂಗ್ ನಲ್ಲಿ ಚಾಲನೆ ದೊರಕಿದ್ದು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ರ ಕಾರ್ಯಾವಧಿಯನ್ನು ಮೂರನೇ ಅವಧಿಗೆ ವಿಸ್ತರಿಸುವ ಅಪರೂಪದ ಮತ್ತು ಅಭೂತಪೂರ್ವ ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದು ಮೂಲಗಳು ಹೇಳಿವೆ.
ಸಿಪಿಸಿಯ 19ನೇ ಕೇಂದ್ರ ಸಮಿತಿಯ 6ನೇ ವಾರ್ಷಿಕ ಸಮಾವೇಶದಲ್ಲಿ ಸುಮಾರು 400 ಪೂರ್ಣಪ್ರಮಾಣದ ಮತ್ತು ಪರ್ಯಾಯ ಸದಸ್ಯರು ಪಾಲ್ಗೊಂಡಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ. ಸಿಪಿಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕ್ಸಿ ಜಿನ್‌ಪಿಂಗ್ , ಸಮಿತಿಯ ರಾಜಕೀಯ ವಿಭಾಗದ ಪರವಾಗಿ ಕಾರ್ಯವರದಿಯನ್ನು ಓದಿದರು. ಅಲ್ಲದೆ ಸಿಪಿಸಿಯ 100 ವರ್ಷದ ಕಾರ್ಯಾವಧಿಯಲ್ಲಿ ಸಾಧಿಸಿದ ಪ್ರಮುಖ ಸಾಧನೆಗಳ ಕುರಿತ ಕರಡು ನಿರ್ಣಯದ ಬಗ್ಗೆ ಮಾಹಿತಿ ನೀಡಿದರು.
68 ವರ್ಷದ ಕ್ಸಿ ಜಿನ್‌ಪಿಂಗ್ ಚೀನಾದ 3 ಪ್ರಮುಖ ಶಕ್ತಿಕೇಂದ್ರಗಳ ಅಧಿಕಾರ ಹೊಂದಿದ್ದಾರೆ. ಸಿಪಿಸಿಯ ಪ್ರಧಾನ ಕಾರ್ಯದರ್ಶಿ, ಸೆಂಟ್ರಲ್ ಮಿಲಿಟರಿ ಕಮಿಷನ್ನ ಅಧ್ಯಕ್ಷ ಹಾಗೂ ದೇಶದ ಅಧ್ಯಕ್ಷ ಹುದ್ದೆ ಈ ಮೂರೂ ಅಧಿಕಾರ ಕೇಂದ್ರಗಳು ಕ್ಷಿಜಿಂಪಿಂಗ್ ನಿಯಂತ್ರಣದಲ್ಲಿವೆ. ಪಕ್ಷದ ಸ್ಥಾಪಕ ಮಾವೊ ಜೆದಾಂಗ್ ಬಳಿಕದ ಅತ್ಯಂತ ಬಲಿಷ್ಟ ಮುಖಂಡರಾಗಿ ಹೊರಹೊಮ್ಮಿರುವ ಕ್ಸಿ, ವರ್ಷದ ಅಧ್ಯಕ್ಷ ಹುದ್ದೆಯ 2ನೇ ಅವಧಿಯ 4 ವರ್ಷ ಸಹಿತ 9 ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು 3ನೇ ಅವಧಿಗೆ ಅಧಿಕಾರ ವಿಸ್ತರಣೆ ಬಯಸಿದ್ದಾರೆ.
2018ರಲ್ಲಿ ಚೀನಾದ ಸಂವಿಧಾನಕ್ಕೆ ಮಾಡಿರುವ ಬದಲಾವಣೆಯಿಂದ ಅಧ್ಯಕ್ಷ ಹುದ್ದೆಗೆ 2 ಅವಧಿಯ ಮಿತಿಯನ್ನು ರದ್ದುಗೊಳಿಸಿರುವುದರಿಂದ ಕ್ಸಿ ಜೀವನಪರ್ಯಂತ ಚೀನಾದ ಅಧ್ಯಕ್ಷರಾಗಿ ಮುಂದುವರಿದರೂ ಅಚ್ಚರಿಯಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. 2016ರಲ್ಲಿ ಅವರನ್ನು ಪಕ್ಷದ ಪರಮೋಚ್ಛ ಮುಖಂಡರನ್ನಾಗಿ ಘೋಷಿಸಲಾಗಿದ್ದು ಮಾವೊ ಅವರ ಬಳಿಕ ಈ ಗೌರವಕ್ಕೆ ಆಯ್ಕೆಯಾದ ಏಕೈಕ ಮುಖಂಡರಾಗಿದ್ದಾರೆ.
ಉಳಿದಂತೆ, ಮುಖಂಡರು 68 ವರ್ಷದ ಬಳಿಕ ನಿವೃತ್ತಿಯಾಗುವ ಅನೌಪಚಾರಿಕ ಪ್ರಕ್ರಿಯೆ ಮುಂದುವರಿಯಲಿದೆಯೇ ಎಂಬ ಕುತೂಹಲಕ್ಕೆ ಈ ಸಮಾವೇಶ ಉತ್ತರ ನೀಡಲಿದೆ. 25 ಸದಸ್ಯರನ್ನು ಹೊಂದಿರುವ ಪ್ರಭಾವೀ ಪಾಲಿಟ್‌ಬ್ಯೂರೋದ ಸುಮಾರು 12ಕ್ಕೂ ಅಧಿಕ ಸದಸ್ಯರು 68 ವರ್ಷ ಮೀರಿದವರು. ಈ ಮಧ್ಯೆ, ಚೀನಾ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ‘ಪೀಪಲ್ಸ್ ಡೈಲಿ’ ರವಿವಾರ ಮುಖಪುಟದಲ್ಲಿ ಕ್ಸಿ ಜಿನ್‌ಪಿಂಗ್ ಅವರ ಸಾಧನೆಯನ್ನು ವರ್ಣಿಸುವ ಲೇಖನ ಪ್ರಕಟಿಸಿದ್ದು ‘ ಕ್ಸಿ ಅಧಿಕಾರದಡಿ ಚೀನಾ ಅತ್ಯಂತ ಸಶಕ್ತ ದೇಶವಾಗಿ ಹೊರಹೊಮ್ಮಿದ್ದು ದೇಶ ಸದೃಢವಾಗಿ ಮುಂದುವರಿಯಲು ಕ್ಸಿಗೆ ದೇಶದ ಜನತೆ ಸಹಕರಿಸಬೇಕು ಎಂದು ಹೇಳಿದೆ.