ಬಾಹ್ಯಾಕಾಶದಲ್ಲಿ ಸುತ್ತಾಡಿದ ಚೀನಾದ ಪ್ರಥಮ ಮಹಿಳೆ ದಾಖಲೆಗೆ ಪಾತ್ರರಾದ ವಾಂಗ್ ಯಾಪಿಂಗ್
ಬೀಜಿಂಗ್, ನ.8: ಚೀನಾದ ಗಗನಯಾನಿ ವಾಂಗ್ ಯಾಪಿಂಗ್ ಬಾಹ್ಯಾಕಾಶದಲ್ಲಿ ನಡೆದಾಡಿದ ಚೀನಾದ ಪ್ರಥಮ ಮಹಿಳೆ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.
ಬಾಹ್ಯಾಕಾಶದಲ್ಲಿ ನಿರ್ಮಾಣಹಂತದಲ್ಲಿರುವ ಚೀನಾದ ಅಂತರಿಕ್ಷ ನಿಲ್ದಾಣದಿಂದ ಸೋಮವಾರ ಬೆಳಿಗ್ಗೆ ಹೊರಗೆ ಬಂದ ವಾಂಗ್ ಯಾಪಿಂಗ್ ಹಾಗೂ ಸಹ ಗಗನಯಾನಿ ಝಾಯ್ ಜಿಗಾಂಗ್, ಆರೂವರೆ ಗಂಟೆ ಬಾಹ್ಯಾಕಾಶದಲ್ಲಿ ಸುತ್ತಾಡಿ ಅಧ್ಯಯನ ಕಾರ್ಯ ನಡೆಸಿದ ಬಳಿಕ ಸುರಕ್ಷಿತವಾಗಿ ಸಿಬಂದಿ ಬಾಹ್ಯಾಕಾಶ ಘಟಕ(ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಗೆ ಬಳಸುವ ವಿವಿಧ ಬೆಂಬಲ ವ್ಯವಸ್ಥೆಗಳನ್ನು ಹೊಂದಿರುವ ನೌಕೆ)ಕ್ಕೆ ಮರಳಿದರು.
ಇದರೊಂದಿಗೆ ಬಾಹ್ಯಾಕಾಶದಲ್ಲಿ ನಡೆದಾಡಿದ ಚೀನಾದ ಪ್ರಥಮ ಮಹಿಳಾ ಗಗನಯಾತ್ರಿ ಎಂಬ ಹಿರಿಮೆಗೆ ಯಾಪಿಂಗ್ ಪಾತ್ರರಾಗಿದ್ದಾರೆ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಸಂಸ್ಥೆಯ ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ದೇಶೀಯವಾಗಿ ನಿರ್ಮಿಸಿರುವ ಆಧುನಿಕ ತಂತ್ರಜ್ಞಾನದ ಗಗನನೌಕೆಯ ಕಾರ್ಯನಿರ್ವಹಣೆಯನ್ನು ಪರೀಕ್ಷಿಸಿದರಲ್ಲದೆ, ಗಗನಯಾನಿಗಳು ಹಾಗೂ ಬಾಹ್ಯಾಕಾಶ ನಿಲ್ದಾಣದ ಯಾಂತ್ರಿಕ ಕೈಯ ನಡುವಿನ ಸಮನ್ವಯದ ಬಗ್ಗೆ ಪರಿಶೀಲನೆ ನಡೆಸಿದರು. ಜತೆಗೆ ಸಹಾಯಕ ಸಾಧನಗಳ ವಿಶ್ವಸನೀಯತೆಯನ್ನು ಪರೀಕ್ಷಿಸಿದರು ಎಂದು ವರದಿಯಾಗಿದೆ.
ಶಾಂಡಾಂಗ್ ಪ್ರಾಂತದ ನಿವಾಸಿ ಯಾಪಿಂಗ್ 5 ವರ್ಷದ ಮಗುವಿನ ತಾಯಿ. 1997ರಲ್ಲಿ ಚೀನಾ ವಾಯುಪಡೆಗೆ ಸೇರ್ಪಡೆಗೊಂಡು ಡೆಪ್ಯುಟಿ ಸ್ಕ್ವಾಡ್ರನ್ ಕಮಾಂಡರ್ ಹುದ್ದೆಯಲ್ಲಿದ್ದರು. 2010ರಲ್ಲಿ ಚೀನಾ ಸೇನೆಯ ಬಾಹ್ಯಾಕಾಶ ವಿಭಾಗಕ್ಕೆ ಸೇರ್ಪಡೆಗೊಂಡಿದ್ದರು. 2012ರ ಮಾರ್ಚ್‌ನಲ್ಲಿ ಬಾಹ್ಯಾಕಾಶಕ್ಕೆ ನೆಗೆದ ಶೆಂರೊವ್ ಸರಣಿಯ 9ನೇ ಬಾಹ್ಯಾಕಾಶ ಯಾತ್ರೆಯಲ್ಲಿ ಬ್ಯಾಕ್ಅಪ್ ಸಿಬ್ಬಂದಿಯಾಗಿ ತೆರಳಿದ್ದು 15 ದಿನ ಅಂತರಿಕ್ಷದಲ್ಲಿ ಕಳೆದಿದ್ದರು. ಇದೇ ಸರಣಿಯ 10ನೇ ಯಾತ್ರೆಯಲ್ಲಿ ಬಾಹ್ಯಾಕಾಶ ನೌಕೆಯೊಳಗಿಂದ ಚೀನಾದಾದ್ಯಂತದ ಸುಮಾರು 80,000 ಶಾಲೆಗಳ 60 ಮಿಲಿಯನ್‌ಗೂ ಅಧಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ, ಬಾಹ್ಯಾಕಾಶದಲ್ಲಿ ಭಾಷಣ ಮಾಡಿದ ಚೀನಾದ ಪ್ರಥಮ ಗಗನಯಾತ್ರಿ ಎನಿಸಿಕೊಂಡಿದ್ದರು.
ಅಕ್ಟೋಬರ್ 16ರಂದು ಉಡಾವಣೆಗೊಂಡ ಶೆನ್ರೊ-13 ಗಗನನೌಕೆಯಲ್ಲಿ 3 ಗಗನಯಾತ್ರಿಗಳು ನಿರ್ಮಾಣ ಹಂತದಲ್ಲಿರುವ ಅಂತರಿಕ್ಷ ನಿಲ್ದಾಣದ ಕಾರ್ಯಕ್ಕೆ ನೆರವಾಗುವ 6 ತಿಂಗಳ ಕಾರ್ಯಯೋಜನೆ ಹಿನ್ನೆಲೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಅತ್ಯಂತ ಪ್ರತಿಷ್ಟಿತ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಚೀನಾದ ಬಾಹ್ಯಾಕಾಶ ನಿಲ್ದಾಣದ ಮೂಲಕ ಬಾಹ್ಯಾಕಾಶದಿಂದ ವಿಶ್ವದ ಉಳಿದ ಭಾಗದ ಮೇಲೆ ಒಂದು ಕಣ್ಣಿಡಲು ಚೀನಾಕ್ಕೆ ಸಾಧ್ಯವಾಗಲಿದೆ.