ಉಗ್ರವಾದಿ ಸಂಘಟನೆ ಟಿಎಲ್‌ಪಿ ನಿಷೇಧ ರದ್ದುಗೊಳಿಸಿದ ಪಾಕಿಸ್ತಾನ‌

Update: 2021-11-08 16:49 GMT

ಇಸ್ಲಮಾಬಾದ್, ನ.8: ಉಗ್ರವಾದಿ ಸಂಘಟನೆ ತೆಹ್ರೀಕ್ ಇ ಲಬ್ಬಾಯ್ಕಾ ಪಾಕಿಸ್ತಾನ(ಟಿಎಲ್‌ಪಿ) ಸರಕಾರಿ ವಿರೋಧಿ ಪ್ರತಿಭಟನೆ ಕೈಬಿಡುವುದಾಗಿ ಘೋಷಿಸಿದ್ದ ಹಿನ್ನೆಲೆಯಲ್ಲಿ ಅದರ ಮೇಲೆ ವಿಧಿಸಿದ್ದ ನಿಷೇಧವನ್ನು ರದ್ದುಗೊಳಿಸಿರುವುಾಗಿ ಪಾಕಿಸ್ತಾನದ ಸರಕಾರ ಘೋಷಿಸಿದೆ.

ಟಿಎಲ್‌ಪಿ ನೇತೃತ್ವದಲ್ಲಿ ನಡೆದಿದ್ದ ಸರಕಾರಿ ವಿರೋಧಿ ಪ್ರತಿಭಟನೆಯಲ್ಲಿ 10 ಪೊಲೀಸರ ಸಹಿತ 20ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ಫ್ರಾನ್ಸ್‌ನಲ್ಲಿ ಧರ್ಮನಿಂದನೆಯ ಉದ್ದೇಶದ ವ್ಯಂಗ್ಯಚಿತ್ರ ಪ್ರಕಟಣೆಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದಲ್ಲಿನ ಫ್ರಾನ್ಸ್‌ನ ರಾಯಭಾರಿಯನ್ನು ಉಚ್ಛಾಟಿಸಬೇಕು ಎಂದು ಆಗ್ರಹಿಸಿ ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆ ಕೈಗೊಂಡಿದ್ದ ಟಿಎಲ್‌ಪಿಯನ್ನು ಈ ವರ್ಷದ ಎಪ್ರಿಲ್‌ನಲ್ಲಿ ನಿಷೇಧಿಸಲಾಗಿತ್ತು.

ಫ್ರಾನ್ಸ್‌ನ ರಾಯಭಾರಿಯನ್ನು ಉಚ್ಛಾಟಿಸುವಂತೆ ಹಾಗೂ ಬಂಧನದಲ್ಲಿರುವ ಟಿಎಲ್‌ಪಿ ಮುಖಂಡ ಸಾದ್ ರಿಝ್ವಿಯ ಬಿಡುಗಡೆಗೆ ಆಗ್ರಹಿಸಿ ಅಕ್ಟೋಬರ್ 18ರಿಂದ ಲಾಹೋರ್‌ನಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದ ಸಂಘಟನೆ, ಮುಂದಿನ ದಿನದಲ್ಲಿ ಇಸ್ಲಮಾಬಾದ್‌ಗೆ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿತ್ತು.

ಈ ಮಧ್ಯೆ, ಸರಕಾರ ಹಾಗೂ ಟಿಎಲ್‌ಪಿ ಮಧ್ಯೆ ರಹಸ್ಯ ಒಪ್ಪಂದ ಏರ್ಪಟ್ಟಿದೆ ಎಂದು ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ಪೂರಕವಾಗಿ ರವಿವಾರ ಅಧಿಸೂಚನೆ ಹೊರಡಿಸಿರುವ ಸರಕಾರ ‘ ಟಿಎಲ್‌ಪಿ ಮುಂದಿನ ದಿನದಲ್ಲಿ ದೇಶದ ಕಾನೂನನ್ನು ಪಾಲಿಸುವುದಾಗಿ ವಾಗ್ದಾನ ನೀಡಿರುವುದರಿಂದ ಅದರ ಮೇಲಿನ ನಿಷೇಧವನ್ನು ರದ್ದುಗೊಳಿಸಲಾಗಿದೆ. ಈ ನಿರ್ಧಾರವನ್ನು ಪ್ರಧಾನಿ ಇಮಾ್ರನ್‌ಖಾನ್ ಅನುಮೋದಿಸಿದ್ದಾರೆ’ ಎಂದಿದೆ.

ಮುಂದಿನ ದಿನದಲ್ಲಿ ಸಾದ್ ರಿಝ್ವಿ ಸಹಿತ ಬಂಧನದಲ್ಲಿರುವ ಹಲವು ಟಿಎಲ್‌ಪಿ ಮುಖಂಡರನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News