ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ವಿದರ್ಭ ಬೌಲರ್ ಅಕ್ಷಯ್ ಕರ್ನೆವಾರ್
ಮುಂಬೈ: ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟ್ರೋಫಿಯಲ್ಲಿ ಮಣಿಪುರ ತಂಡವನ್ನು 167 ರನ್‌ಗಳಿಂದ ಸೋಲಿಸಿದ ವಿದರ್ಭ ತಂಡದ ಬೌಲರ್ ಅಕ್ಷಯ್ ಕರ್ನೆವಾರ್ ಸೋಮವಾರ ವಿಶ್ವ ದಾಖಲೆಯ ಸಾಧನೆಯೊಂದಿಗೆ ಗಮನ ಸೆಳೆದರು.
ಭರ್ಜರಿ ಫಾರ್ಮ್ ನಲ್ಲಿರುವ ಕರ್ನೆವಾರ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿಅತ್ಯಂತ ಮಿತವ್ಯಯದ ಬೌಲಿಂಗ್ ಮಾಡಿ ವಿಶ್ವ ದಾಖಲೆಯೊಂದನ್ನು ಮುರಿದರು. 29 ವರ್ಷ ವಯಸ್ಸಿನ ಕರ್ನೆವಾರ್ ಪಂದ್ಯದಲ್ಲಿ ಒಂದೂ ರನ್ ನೀಡದೇ ಗಮನ ಸೆಳೆದರು. 4 ಓವರ್ ಗಳ ಬೌಲಿಂಗ್ ನಲ್ಲಿ 4 ಮೇಡನ್ ಓವರ್ ಸಹಿತ 2 ವಿಕೆಟನ್ನು ಪಡೆದರು( 4-4-0-2) . ಪುರುಷರ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ನಾಲ್ಕು ಮೇಡನ್‌ಗಳನ್ನು ಬೌಲ್ ಮಾಡಿದ ಮೊದಲ ಕ್ರಿಕೆಟಿಗ ಎನಿಸಿಕೊಂಡರು.
223 ರನ್‌ಗಳ ಗುರಿಯನ್ನು ಪಡೆದಿದ್ದ ಮಣಿಪುರವನ್ನು 16.3 ಓವರ್‌ಗಳಲ್ಲಿ 55 (ಆಲೌಟ್) ಗೆ ನಿರ್ಬಂಧಿಸಿದ ವಿದರ್ಭ ಭರ್ಜರಿ ಜಯ ದಾಖಲಿಸಿತು.
ಕರ್ನೇವಾರ್ ಮಂಗಳವಾರ ಸಿಕ್ಕಿಂ ವಿರುದ್ಧ ಹ್ಯಾಟ್ರಿಕ್ ಸಾಧಿಸಿದರು. ಸಿಕ್ಕಿಂ ವಿರುದ್ದ 4 ಓವರ್ ಗಳಲ್ಲಿ 1 ಮೇಡನ್ ಸಹಿತ 5 ರನ್ ನೀಡಿ 4 ವಿಕೆಟ್ ಗಳನ್ನು ಪಡೆದಿದ್ದರು.
ಮಣಿಪುರ ವಿರುದ್ಧದ ಪ್ರದರ್ಶನದ ನಂತರ ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಕರ್ನೇವಾರ್, "ಇದು ನಂಬಲಸಾಧ್ಯ. ಇಡೀ ಪಂದ್ಯದಲ್ಲಿ ಒಂದೇ ಒಂದು ರನ್ ಅನ್ನು ಬಿಟ್ಟುಕೊಡದಿರುವುದು ಅಸಾಮಾನ್ಯ ಸಂಗತಿಯಾಗಿದೆ ಹಾಗೂ ನನಗೆ ನಿಜವಾಗಿಯೂ ತುಂಬಾ ಸಂತೋಷವಾಗುತ್ತಿದೆ" ಎಂದು ಅವರು ಹೇಳಿದರು.