ಅಫ್ಘಾನ್: ಬಾಂಬ್ ಸ್ಫೋಟದಲ್ಲಿ ಕನಿಷ್ಟ 3 ಮಂದಿ ಮೃತ್ಯು

Update: 2021-11-12 16:22 GMT
PHOTO COURTESY: GOOGLE MAP

ಕಾಬೂಲ್, ನ.12: ಅಫ್ಘಾನಿಸ್ತಾನದ ಪೂರ್ವದಲ್ಲಿರುವ ನಂಗರ್ಹಾರ್ ಪ್ರಾಂತದ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಟ 3 ಮಂದಿ ಮೃತಪಟ್ಟಿದ್ದು ಮಸೀದಿಯ ಇಮಾಮ್ ಸಹಿತ 15 ಮಂದಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. 

ಮಸೀದಿಯ ಒಳಗಡೆ ಸ್ಫೋಟಕ ಇರಿಸಿರುವ ಸಾಧ್ಯತೆಯಿದೆ. ಮಧ್ಯಾಹ್ನ ಸುಮಾರು 1:30ರ ಸಂದರ್ಭ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ನಿವಾಸಿ ಅಟಲ್ ಶಿನ್ವಾರಿ ಹೇಳಿದ್ದಾರೆ. ನಂಗರ್ಹಾರ್ನ ಸ್ಪಿನ್ಘರ್ ಜಿಲ್ಲೆಯಲ್ಲಿರುವ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭ ಸ್ಫೋಟ ಸಂಭವಿಸಿರುವುದನ್ನು ತಾಲಿಬಾನ್ನ ವಕ್ತಾರರೂ ದೃಢಪಡಿಸಿದ್ದಾರೆ. ಸುನ್ನಿ ಮುಸ್ಲಿಮರು ಈ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಸ್ಫೋಟದಲ್ಲಿ ಕನಿಷ್ಟ 3 ಮಂದಿ ಮೃತಪಟ್ಟಿದ್ದು 15 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದಂದಿನಿಂದ ಅಲ್ಲಿ ಶಿಯಾ ಮುಸ್ಲಿಮರ ಮಸೀದಿಯನ್ನು ಗುರಿಯಾಗಿಸಿಕೊಂಡು ಹಲವಾರು ಬಾಂಬ್ ದಾಳಿ ನಡೆದಿದ್ದು ಈ ಸ್ಫೋಟಗಳಿಗೆ ಐಸಿಸ್ ಭಯೋತ್ಪಾದಕ ಸಂಘಟನೆಯ ಅಫ್ಘಾನ್ ಘಟಕ ಹೊಣೆ ಹೊತ್ತುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News