ನಿಪುಣ ವಿದೇಶಿ ವೃತ್ತಿಪರರಿಗೆ ಪೌರತ್ವ ನೀಡಲು ಸೌದಿ ಅರೆಬಿಯಾ ನಿರ್ಧಾರ

Update: 2021-11-12 16:35 GMT

ಜಿದ್ದಾ, ನ.12: ಹಲವಾರು ವೃತ್ತಿಗಳಲ್ಲಿ ವಿಶೇಷ ನೈಪುಣ್ಯ ಹೊಂದಿರುವ ವಿದೇಶಿ ಪ್ರಜೆಗಳಿಗೆ ಪೌರತ್ವ ನೀಡುವ ಪ್ರಸ್ತಾವನೆಯನ್ನು ಸೌದಿ ಅರೆಬಿಯಾ ಸರಕಾರ ಅನುಮೋದಿಸಿದೆ.

ಕಾನೂನು, ವೈದ್ಯಕೀಯ, ವಿಜ್ಞಾನ, ಸಂಸ್ಕೃತಿ, ಕ್ರೀಡೆ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಅತ್ಯುನ್ನತ ಕೌಶಲ್ಯ ಹೊಂದಿರುವ ವೃತ್ತಿಪರರು ಸೌದಿಯ ಪೌರತ್ವವನ್ನು ನೀಡಲು ಈ ನೂತನ ರಾಜಾಜ್ಞೆ ಅವಕಾಶ ಒದಗಿಸುತ್ತದೆ. ಸೌದಿ ಅರೆಬಿಯಾದಲ್ಲಿ ವೃತ್ತಿಪರರಿಗೆ ಆಕರ್ಷಕ ಉನ್ನತ ಮಟ್ಟದ ವ್ಯಾವಹಾರಿಕ ವಾತಾವರಣ ಕಲ್ಪಿಸುವ ‘ದೂರದೃಷ್ಟಿ 2030’ಕ್ಕೆ ಈ ನಿರ್ಧಾರ ಪೂರಕವಾಗಿದೆ. ನಿರ್ಧಿಷ್ಟ ಕ್ಷೇತ್ರದಲ್ಲಿ ಹೆಸರು ಮಾಡಿರುವ ವೃತ್ತಿಪರರನ್ನು ಮಾತ್ರವಲ್ಲ, ಕೆಲವು ವಲಸಿಗರು ಹಾಗೂ ಸಮುದಾಯದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ. ಅಗತ್ಯದ ಮಾನದಂಡ ಹೊಂದಿರುವ ಪ್ರಸಿದ್ಧ ವಿಜ್ಞಾನಿಗಳು, ಸಂಶೋಧಕರು ಹಾಗೂ ಸಾಂಸ್ಕತಿಕ ವೃತ್ತಿಪರರಿಗೆ ಪೌರತ್ವ ನೀಡುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ 2019ರಲ್ಲಿ ಸೌದಿ ಅರೆಬಿಯಾ ಘೋಷಿಸಿತ್ತು. 

‘ವಿಜ್ಞಾನಿಗಳು, ಮೇಧಾವಿಗಳು ಹಾಗೂ ಅನ್ವೇಷಕರನ್ನು ಆಕರ್ಷಿಸುವ ಮೂಲಕ ಸೌದಿ ಅರೆಬಿಯಾವನ್ನು ಅರಬ್ ಜಗತ್ತು ಹೆಮ್ಮೆಪಡುವ ವೈವಿಧ್ಯಮಯ ಕೇಂದ್ರವನ್ನಾಗಿಸುವ ಉದ್ದೇಶವಿದೆ’ ಎಂದು ಸರಕಾರದ ಯೋಜನೆಯಾದ ‘ಸೌದಿ ಪ್ರೊಜೆಕ್ಟ್’ ಟ್ವಿಟರ್ ನಲ್ಲಿ ಹೇಳಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News