ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿ: ಬಂಗಾಳ ವಿರುದ್ದ 'ಸೂಪರ್' ಓವರ್ ನಲ್ಲಿ ಗೆದ್ದ ಕರ್ನಾಟಕ ಸೆಮಿ ಫೈನಲ್ ಗೆ

Update: 2021-11-18 13:11 GMT
ಸಾಂದರ್ಭಿಕ ಚಿತ್ರ, Courtesy by BCCI

ಹೊಸದಿಲ್ಲಿ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿಯಲ್ಲಿ  ಬಂಗಾಳ ತಂಡವನ್ನು ಸೂಪರ್  ಓವರ್ ನಲ್ಲಿ ಮಣಿಸಿದ ಕರ್ನಾಟಕವು ಸೆಮಿ ಫೈನಲ್ ಸುತ್ತಿಗೆ ಪ್ರವೇಶಿಸಿದೆ.

ಗುರುವಾರ ನಡೆದ ಎರಡನೇ ಕ್ವಾರ್ಟರ್  ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಗೆಲ್ಲಲು ಸವಾಲಿನ ಮೊತ್ತ ಬೆನ್ನಟ್ಟಿದ ಬಂಗಾಳ ಕೂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದ ಕಾರಣ ಪಂದ್ಯವು ಟೈನಲ್ಲಿ ಕೊನೆಗೊಂಡಿತು.

ಆಗ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಂಗಾಳ ಒಂದು ಸೂಪರ್ ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿತು. ಗೆಲ್ಲಲು 6 ರನ್ ಗುರಿ ಪಡೆದ ಕರ್ನಾಟಕವು ಕೇವಲ 2 ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿ ಗೆಲುವಿನ ನಗೆ ಬೀರಿತು. ನಾಯಕ ಮನೀಶ್ ಪಾಂಡೆ ಅವರು ಮುಕೇಶ್ ಕುಮಾರ್ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಗೆಲುವನ್ನು ಖಚಿತಪಡಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದ ಬಂಗಾಳ ತಂಡ ಕರ್ನಾಟಕವನ್ನು ಬ್ಯಾಟಿಂಗ್ ಗೆ ಇಳಿಸಿತು. ಕರುಣ್ ನಾಯರ್(ಔಟಾಗದೆ 55, 29 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್ ಮನ್ ರೋಹನ್ ಕದಮ್(30 ರನ್, 29 ಎಸೆತ, 3 ಬೌಂ. 1 ಸಿ.)ಹಾಗೂ  ಮನೀಶ್ ಪಾಂಡೆ(29, 34 ಎಸೆತ, 1 ಬೌಂ. 1 ಸಿ.)ನೆರವಿನಿಂದ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಬಂಗಾಳ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಪಂದ್ಯವನ್ನು ಟೈಗೊಳಿಸಿತು. ವೃತಿಕ್ ಚಟರ್ಜಿ ಅರ್ಧಶತಕ(51, 40 ಎಸೆತ, 2 ಬೌಂಡರಿ, 3 ಸಿಕ್ಸರ್)ಗಳಿಸಿ ತಂಡದ ಗೆಲುವಿಗಾಗಿ ಹೋರಾಡಿದರು. ಇವರಿಗೆ  ಆರಂಭಿಕ ಬ್ಯಾಟ್ಸ್ ಮನ್ ಶ್ರೀವಾಸ್ತವ ಗೋಸ್ವಾಮಿ(22), ಕೈಫ್ ಅಹ್ಮದ್(20) ಹಾಗೂ ರಿತ್ವಿಕ್ ಚೌಧರಿ(ಔಟಾಗದೆ 36) ಸಾಥ್ ನೀಡಿದರು.

ಕರ್ನಾಟಕದ ಪರವಾಗಿ ದರ್ಶನ್(3-26) ಹಾಗೂ ಜಗದೀಶ್ ಸುಚಿತ್(2-24)ಐದು ವಿಕೆಟ್ ಗಳನ್ನ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News