ಮೊದಲ ಟೆಸ್ಟ್: ನ್ಯೂಝಿಲ್ಯಾಂಡ್ ವಿರುದ್ಧ ಭಾರತ 258/4

Update: 2021-11-25 11:39 GMT
ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜ Photo: BCCI

ಕಾನ್ಪುರ: ಚೊಚ್ಚಲ ಪಂದ್ಯವನ್ನಾಡುತ್ತಿರುವ ಶ್ರೇಯಸ್ ಅಯ್ಯರ್(ಔಟಾಗದೆ 75, 63 ಎಸೆತ, 6 ಬೌಂ.), ಆರಂಭಿಕ ಬ್ಯಾಟ್ಸ್ ಮನ್ ಶುಭಮನ್ ಗಿಲ್(52, 93 ಎಸೆತ, 5 ಬೌಂ., 1 ಸಿ.) ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜ(ಔಟಾಗದೆ 50,100 ಎಸೆತ, 6 ಬೌಂ.)ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ತಂಡ ಗುರುವಾರ ಆರಂಭವಾಗಿರುವ ಮೊದಲ ಟೆಸ್ಟ್ ನ ಮೊದಲ ದಿನದಾಟದಂತ್ಯಕ್ಕೆ 84 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದೆ.

ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ಪರ ಹಿರಿಯ ಬ್ಯಾಟ್ಸ್ ಮನ್ ಗಳಾದ ಚೇತೇಶ್ವರ ಪೂಜಾರ(26) ಹಾಗೂ ಅಜಿಂಕ್ಯ ರಹಾನೆ(35) ದೊಡ್ಡ ಕಾಣಿಕೆ ನೀಡಲು ವಿಫಲರಾದರು. ಕಿರಿಯ ಆಟಗಾರರಾದ ಗಿಲ್ ಹಾಗೂ ಅಯ್ಯರ್ ಅರ್ಧಶತಕ ಗಳಿಸಿ ಗಮನ ಸೆಳೆದರು.

ಭಾರತವು 4 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದ್ದಾಗ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜ 5ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 113 ರನ್ ಸೇರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ಇದಕ್ಕೂ ಮೊದಲು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ (13)ಬೇಗನೆ ಔಟಾದಾಗ ಪೂಜಾರ ಹಾಗೂ ಗಿಲ್ 2ನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿ ಅಗ್ರ ಸರದಿಯಲ್ಲಿ ತಂಡವನ್ನು ಆಧರಿಸಿದ್ದರು.

ನ್ಯೂಝಿಲ್ಯಾಂಡ್ ಪರ ವೇಗದ ಬೌಲರ್ ಕೈನ್ ಜಮೀಸನ್(3-47)ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News