ಕೋವಿಡ್ ಲಸಿಕೆಗೆ ಪೇಟೆಂಟ್ ಮನ್ನಾ: ಭಾರತದ ನೇತೃತ್ವದಲ್ಲಿ ಆಗ್ರಹ ಮಂಡನೆಗೆ ನಿರ್ಧಾರ

Update: 2021-11-26 15:49 GMT
ಸಾಂದರ್ಭಿಕ ಚಿತ್ರ

ಜಿನೆವಾ, ನ.26: ಕೋವಿಡ್-19 ಲಸಿಕೆಗೆ ಪೇಟೆಂಟ್ ಮನ್ನಾ ಮಾಡಬೇಕೆಂಬ ಒತ್ತಾಯವನ್ನು ಮುಂದಿನ ವಾರ ನಡೆಯಲಿರುವ ವಿಶ್ವವ್ಯಾಪಾರ ಸಂಸ್ಥೆ(ಡಬ್ಲ್ಯೂಟಿಒ) ಯ ಸಭೆಯಲ್ಲಿ ಭಾರತದ ನೇತೃತ್ವದಲ್ಲಿ ಮಂಡಿಸಲಾಗುವುದು ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ.

ನವೆಂಬರ್ 30ರಂದು ಜಿನೆವಾದಲ್ಲಿ ನಡೆಯಲಿರುವ ಡಬ್ಲ್ಯುಟಿಒ ಸಚಿವ ಮಟ್ಟದ ಸಮ್ಮೇಳನದಲ್ಲಿ ಭಾರತ ತನಗಾಇ ಮಾತ್ರವಲ್ಲ, ಇತರ ಅಭಿವೃದ್ಧಿಶೀಲ ದೇಶಗಳ ಪರವಾಗಿಯೂ ಈ ಕುರಿತು ಧ್ವನಿ ಎತ್ತಲಿದೆ . ಅಭಿವೃದ್ಧಿಶೀಲ ದೇಶಗಳ ಹಿತಾಸಕ್ತಿಯ ವಿಷಯದಲ್ಲಿ ರಾಜಿ ಬೇಡ ಎಂಬುದು ನಮ್ಮ ನಿಲುವಾಗಿದೆ ಎಂದು ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿ ಶ್ಯಾಮಲಾಲ್ ಮಿಶ್ರಾ ಹೇಳಿದ್ದಾರೆ. ನ್ಯಾಯಸಮ್ಮತ ಮತ್ತು ಸಮಂಜಸ ಒಪ್ಪಂದವಾಗಬೇಕು. ಕೆಲವು ಔಷಧ ಉತ್ಪಾದಕ ಸಂಸ್ಥೆಯ ಹಿತಾಸಕ್ತಿಗಾಗಿ ಬಡದೇಶಗಳ ಜನರ ಪ್ರಾಣವನ್ನು ಅಪಾಯಕ್ಕೆ ಒಡ್ಡುವುದು ಸರಿಯಲ್ಲ ಎಂಬುದನ್ನು ಶ್ರೀಮಂತ ದೇಶಗಳ ಅರ್ಥಮಾಡಿಕೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಭಾರತದ ಮತ್ತೊಬ್ಬ ಹಿರಿಯ ಅಧಿಕಾರಿ ಹೇಳಿರುವುದಾಗಿ ‘ರಾಯ್ಟರ್ಸ್’ ಶುಕ್ರವಾರ ವರದಿ ಮಾಡಿದೆ.

ಕೋವಿಡ್-19 ಲಸಿಕೆ ಹಾಗೂ ಚಿಕಿತ್ಸೆಯ ಪೇಟೆಂಟ್ ಅನ್ನು ತಾತ್ಕಾಲಿಕವಾಗಿ ಮನ್ನಾ ಮಾಡುವ ಪ್ರಸ್ತಾವನೆಯನ್ನು ಒಂದು ವರ್ಷದ ಹಿಂದೆ ಡಬ್ಲ್ಯುಟಿಒ ಸಭೆಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಂಡಿಸಿದ್ದು ಇದಕ್ಕೆ ಹಲವು ಶ್ರೀಮಂತ ದೇಶಗಳಿಂದ ವಿರೋಧ ವ್ಯಕ್ತವಾಗಿತ್ತು. ಅಂದಿನಿಂದಲೂ ಈ ವಿಷಯದ ಕುರಿತ ಮಾತುಕತೆ ಸ್ಥಗಿತಗೊಂಡಿದೆ. ಅಭಿವೃದ್ಧಿಹೊಂದಿದ ದೇಶಗಳು

ಯುರೋಪಿಯನ್ ಯೂನಿಯನ್, ಸ್ವಿಝರ್ಲ್ಯಾಂಡ್ ಮತ್ತು ಬ್ರಿಟನ್ ನೇತೃತ್ವದಲ್ಲಿ ಬಡರಾಷ್ಟ್ರಗಳಿಗೆ ಲಸಿಕೆ ಲಭಿಸದಂತೆ ತಡೆಯುತ್ತಿದ್ದು ಇದು ಹಲವು ಜೀವಹಾನಿಗೆ ಕಾರಣವಾಗಿದೆ ಎಂದು ಭಾರತ ಆರೋಪಿಸಿದೆ. ತಮ್ಮ ದೇಶ ರಾಜಿಒಪ್ಪಂದಕ್ಕೆ ಮುಕ್ತವಾಗಿದೆ , ಆದರೆ ಪೇಟೆಂಟ್ ಪೂರ್ಣವಾಗಿ ಮನ್ನಾ ಮಾಡುವುದಕ್ಕೆ ವಿರೋಧವಿದೆ ಎಂದು ಡಬ್ಲ್ಯುಟಿಒಗೆ ಸ್ವಿಝರ್ಲ್ಯಾಂಡಿನ ರಾಯಭಾರಿ ಡಿಡ್ಲಿಯರ್ ಗುರುವಾರ ಹೇಳಿಕೆ ನೀಡಿದ್ದಾರೆ. ಈ ಬಿಕ್ಕಟ್ಟಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ಮುಂದುವರಿಸಲು ಕಳೆದ ವಾರ ನಡೆದ ವಿಶ್ವವ್ಯಾಪಾರ ಸಂಸ್ಥೆಯ ಪೇಟೆಂಟ್ ವಿಷಯಕ್ಕೆ ಸಂಬಂಧಿಸಿದ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News