ವಲಸಿಗರ ಬಿಕ್ಕಟ್ಟಿಗೆ ಸಂಬಂಧಿಸಿ ಬ್ರಿಟನ್ ಜತೆಗಿನ ಮಾತುಕತೆ ಸ್ಥಗಿತ: ಫ್ರಾನ್ಸ್

Update: 2021-11-26 16:43 GMT
ಸಾಂದರ್ಭಿಕ ಚಿತ್ರ:PTI

ಪ್ಯಾರಿಸ್, ನ.26: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಬರೆದ ಪತ್ರದಿಂದ ತೀವ್ರ ಆಕ್ರೋಶಗೊಂಡಿರುವ ಫ್ರಾನ್ಸ್, ವಲಸಿಗರ ಬಿಕ್ಕಟ್ಟಿಗೆ ಸಂಬಂಧಿಸಿ ಬ್ರಿಟನ್‌ನೊಂದಿಗೆ ನಡೆಸಲು ಉದ್ದೇಶಿಸಿದ್ದ ಮಾತುಕತೆಯನ್ನು ಮುಂದುವರಿಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ವಲಸಿಗರ ಬಿಕ್ಕಟ್ಟಿನ ವಿಷಯಕ್ಕೆ ಸಂಬಂಧಿಸಿ ಈ ವಾರಾಂತ್ಯ ಯುರೋಪ್‌ನ ಇತರ ಸಚಿವರೊಂದಿಗೆ ನಡೆಯುವ ಮಾತುಕತೆಗೆ ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‌ರನ್ನು ಆಹ್ವಾನಿಸುವುದಿಲ್ಲ ಎಂದು ಫ್ರಾನ್ಸ್‌ನ ಆಂತರಿಕ ಸಚಿವ ಜೆರಾಲ್ಡ್ ಡರ್ಮಾನಿಯನ್ ಹೇಳಿದ್ದಾರೆ. ಇದರೊಂದಿಗೆ ಬ್ರಿಟನ್‌ನ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಸಭೆ ನಡೆಯುವ ಸಾಧ್ಯತೆಯಿದೆ . ಬ್ರಿಟನ್-ಫ್ರಾನ್ಸ್ ನಡುವೆ ಮೀನುಗಾರಿಕೆ ಪ್ರದೇಶದ ವ್ಯಾಪ್ತಿಗೆ ಸಂಬಂಧಿಸಿದ ವಿವಾದ ಬಿಗಡಾಯಿಸಿದ್ದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ತೊಡಕುಂಟಾಗಿದೆ.

ಜಲವ್ಯಾಪ್ತಿಯನ್ನು ದಾಟಿದ ವಲಸಿಗರನ್ನು ಫ್ರಾನ್ಸ್ ತಕ್ಷಣ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರನ್‌ಗೆ ಬರೆದ ಪತ್ರದ ಬಗ್ಗೆ ತೀರಾ ನಿರಾಶೆಯಾಗಿದೆ ಎಂದು ಜೆರಾಲ್ಡ್ ಡರ್ಮಾನಿಯನ್ ಬ್ರಿಟನ್‌ಗೆ ಪ್ರತಿಕ್ರಿಯಿಸಿದ್ದಾರೆ. ಬಳಿಕ ಈ ಪತ್ರವನ್ನು ಜಾನ್ಸನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ವಿಷಯವನ್ನು ಇನ್ನಷ್ಟು ಬಿಗಡಾಯಿಸಿದ್ದಾರೆ ಎಂದು ಫ್ರಾನ್‌ನ ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News