ದ.ಆಫ್ರಿಕಾದಲ್ಲಿ ಕೋವಿಡ್‌ನ ಅಪಾಯಕಾರಿ ನೂತನ ರೂಪಾಂತರ ಪತ್ತೆ

Update: 2021-11-26 17:05 GMT
ಸಾಂದರ್ಭಿಕ ಚಿತ್ರ:PTI

ಕೇಪ್‌ಟೌನ್, ನ.26: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ನ ಅಪಾಯಕಾರಿ ನೂತನ ರೂಪಾಂತರ ತಳಿ ಪತ್ತೆಯಾಗಿದ್ದು. ಇದರ ಸಂಭಾವ್ಯ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಲು ವಿಜ್ಞಾನಿಗಳು ಪ್ರಯೋಗ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿ.1.1.529 ಎಂದು ಹೆಸರಿಸಲಾಗಿರುವ ಈ ರೂಪಾಂತರ ತಳಿ ಅಸಾಮಾನ್ಯ ರೂಪಾಂತರ ತಳಿಗಳ ಸಮೂಹವಾಗಿರುವುದರಿಂದ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ರೂಪಾಂತರ ತಳಿಗಳ ಗುಂಪೇ ಇದರಲ್ಲಿರುವುದರಿಂದ ದೇಹದ ಪ್ರತಿರೋಧಕ ಶಕ್ತಿಯನ್ನು ನಿವಾರಿಸಿಕೊಳ್ಳಲು ಹಾಗೂ ತೀವ್ರ ವೇಗದಲ್ಲಿ ಹರಡಬಲ್ಲದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ದೇಶದಲ್ಲಿ ಇದುವರೆಗೆ ಈ ಸೋಂಕಿನ 22 ಪೊಸಿಟಿವ್ ಪ್ರಕರಣ ದಾಖಲಾಗಿದೆ ಎಂದು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆ ಹೇಳಿದೆ.

ದುರದೃಷ್ಟವಶಾತ್, ನಾವು ಕೊರೋನ ಸೋಂಕಿನ ಹೊಸ ರೂಪಾಂತರವನ್ನು ಪತ್ತೆಹಚ್ಚಿದ್ದು ಇದು ದೇಶಕ್ಕೆ ತೀವ್ರ ಆತಂಕದ ವಿಷಯವಾಗಿದೆ. ಇದು ವೈರಸ್‌ಗಳ ಸಮೂಹವನ್ನು ಹೊಂದಿದ್ದು ಸೋಂಕುಗಳ ಪುನರುತ್ತಾನಕ್ಕೆ ಕಾರಣವಾಗುತ್ತದೆ . ಬೋಟ್ಸಾನಾ ಮತ್ತು ಹಾಂಗ್‌ಕಾಂಗ್‌ನಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಿರುವ ಪ್ರಯಾಣಿಕರಲ್ಲೂ ಇದು ಪತ್ತೆಯಾಗಿದೆ ಎಂದು ತಳಿ ಹಾಗೂ ವಂಶವಾಹಿ(ಜೀನ್) ಕಣ್ಗಾವಲು ಸಂಸ್ಥೆಯ ಅಧಿಕಾರಿ ಟೂಲಿಯೊ ಡಿ ಒಲಿವಿರಾ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ನೂತನ ರೂಪಾಂತರ ತಳಿ ತೀವ್ರ ಆತಂಕಕ್ಕೆ ಕಾರಣವಾಗಿದ್ದು ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನ ಸೋಂಕು ಭಾರೀ ಪ್ರಮಾಣದಲ್ಲಿ ಉಲ್ಬಣಿಸಲು ಇದು ಪ್ರಮುಖ ಕಾರಣವಾಗಿದೆ . ಪ್ರಿಟೋರಿಯಾದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಈ ಸೋಂಕು ಸಮುದಾಯ ಮಟ್ಟಕ್ಕೆ ಪ್ರಸಾರವಾಗಿರುವ ಶಂಕೆಯಿದೆ ಎಂದು ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಾಹ್ಲಾ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ ಕೊರೋನ ಸೋಂಕಿನ 2.95 ಮಿಲಿಯನ್ ಪ್ರಕರಣ ದಾಖಲಾಗಿದ್ದು 89,567 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

► ದೈನಂದಿನ ಸೋಂಕು ಪ್ರಕರಣ ಹಠಾತ್ ಹೆಚ್ಚಳ

ಈ ಮಧ್ಯೆ, ದಕ್ಷಿಣ ಆಫ್ರಿಕಾದಲ್ಲಿ ದೈನಂದಿನ ಕೊರೋನ ಸೋಂಕು ಪ್ರಕರಣ ನವೆಂಬರ್ ಮೊದಲ ವಾರ ಸುಮಾರು 100 ಇದ್ದರೆ, ಬುಧವಾರ ಏಕಾಏಕಿ 1,200ಕ್ಕೆ ಹೆಚ್ಚಿದೆ. ಇದು ಕೊರೋನ ಸೋಂಕಿನ 4ನೇ ಅಲೆಯಾಗಿರಬಹುದು. ಅಲ್ಲದೆ ಹಬ್ಬಗಳ ಸೀಸನ್ ಆರಂಭವಾದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದು ಸೋಂಕು ಉಲ್ಬಣಕ್ಕೆ ಕಾರಣವಾಗಿರಬಹುದು ಎಂದು ಆರಂಭದಲ್ಲಿ ಅಧಿಕಾರಿಗಳು ಊಹಿಸಿದ್ದರು.

ಜೊಹಾನ್ಸ್‌ಬರ್ಗ್, ಪ್ರಿಟೋರಿಯಾ ಮತ್ತು ಗೌಟೆಂಗ್ ಪ್ರಾಂತದಲ್ಲಿ ನೂತನ ರೂಪಾಂತರ ಸೋಂಕಿನ ಪ್ರಕರಣ ಹಾಗೂ ಪೊಸಿಟಿವ್ ಪ್ರಕರಣಗಳ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚುತ್ತಿದೆ ಎಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News