ಇರಾನ್ ಪರಮಾಣುಶಕ್ತ ರಾಷ್ಟ್ರವಾಗದಂತೆ ತಡೆಯುತ್ತೇವೆ: ಬ್ರಿಟನ್-ಇಸ್ರೇಲ್ ಘೋಷಣೆ

Update: 2021-11-29 16:48 GMT
ಸಾಂದರ್ಭಿಕ ಚಿತ್ರ(file photo:PTI)

ಲಂಡನ್, ನ.29: ಇರಾನ್ ಪರಮಾಣು ಶಕ್ತ ರಾಷ್ಟ್ರವಾಗಿ ಬೆಳೆಯದಂತೆ ತಡೆಯಲು ಹಗಲು-ರಾತ್ರಿಯೆನ್ನದೆ ಕಾರ್ಯನಿರ್ವಹಿಸಲಾಗುವುದು ಎಂದು ಬ್ರಿಟನ್ ಮತ್ತು ಇಸ್ರೇಲ್‌ನ ವಿದೇಶಿ ಸಚಿವರು ಜಂಟಿಯಾಗಿ ಹೇಳಿಕೆ ನೀಡಿದ್ದಾರೆ.

ಗಡಿಯಾರದ ಮುಳ್ಳು ಚಲಿಸುತ್ತಿದೆ ಮತ್ತು ಈ ಮೂಲಕ ಇರಾನ್‌ನ ಮಹಾತ್ವಾಕಾಂಕ್ಷೆಯನ್ನು ಭಗ್ನಗೊಳಿಸಲು ನಮ್ಮ ಸಹಭಾಗಿಗಳು ಹಾಗೂ ಮಿತ್ರರ ಜತೆ ನಿಕಟ ಸಹಕಾರದಿಂದ ಕಾರ್ಯ ನಿರ್ವಹಿಸುವ ಅಗತ್ಯವನ್ನು ಒತ್ತಿಹೇಳುತ್ತಿದೆ ಎಂದು ಬ್ರಿಟನ್ ಸಚಿವ ಲಿರ್ ಟ್ರುಸ್ ಮತ್ತು ಇಸ್ರೇಲ್ ಸಚಿವ ಯಾಸಿರ್ ಲ್ಯಾಪಿಡ್‌ರ ಹೇಳಿಕೆ ‘ದಿ ಟೆಲಿಗ್ರಾಫ್’ ಪತ್ರಿಕೆಯಲ್ಲಿ ರವಿವಾರ ಪ್ರಕಟವಾಗಿದೆ. ಇಸ್ರೇಲ್ ದೇಶ ಬ್ರಿಟನ್‌ನ ಪ್ರಥಮ ಆದ್ಯತೆಯ ಸೈಬರ್ ಸಹಭಾಗಿಯಾಗಿದೆ. ವಿಶ್ವದಲ್ಲಿ ಸೈಬರ್ ಕ್ಷೇತ್ರಕ್ಕೆ ಬೆದರಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ನಮ್ಮ ಸೈಬರ್ ಭದ್ರತೆ ಹೆಚ್ಚಿಸಲು ಇಸ್ರೇಲ್ ನೆರವಾಗಲಿದೆ ಎಂದು ಬ್ರಿಟನ್ ಹೇಳಿದೆ.

ಲ್ಯಾಪಿಡ್ ಬ್ರಿಟನ್ ಹಾಗೂ ಫ್ರಾನ್ಸ್‌ಗೆ 2 ದಿನ ಭೇಟಿ ನೀಡುವ ಕಾರ್ಯಕ್ರಮವಿದೆ. ಇರಾನ್ ವಿರುದ್ಧದ ಆರ್ಥಿಕ ದಿಗ್ಭಂಧನ ಮುಂದುವರಿಸಬೇಕು ಎಂದು ಒತ್ತಾಯಿಸುವುದು ಈ ಭೇಟಿಯ ಉದ್ದೇಶವಾಗಿದೆ. ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್, ‘ಇರಾನ್ ತನ್ನ ಪರಮಾಣು ಕಾರ್ಯಕ್ರಮಕ್ಕೆ ಸ್ವಲ್ಪ ಮಿತಿ ಹೇರಿದರೆ ಆ ದೇಶದ ವಿರುದ್ಧದ ನಿರ್ಬಂಧ ಸಡಿಲಿಸುವ ಪ್ರಸ್ತಾವದ ಬಗ್ಗೆ ತಮ್ಮ ದೇಶ ಆತಂಕಗೊಂಡಿದೆ’ ಎಂದಿದ್ದರು.

ಬ್ರಿಟನ್-ಇಸ್ರೇಲ್ ವಿದೇಶ ಸಚಿವರ ಜಂಟಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಸಯೀದ್ ಖತೀಬ್ಜಾದೆ ‘ ಇದು ವಿಯೆನ್ನಾ ಮಾತುಕತೆಯಲ್ಲಿ ಪಾಲ್ಗೊಳ್ಳುವ ಪಶ್ಚಿಮದ ದೇಶಗಳ ಉದ್ದೇಶದ ಬಗ್ಗೆ ಸಂಶಯ ಮೂಡಿಸುತ್ತದೆ. ಅವರು ನಿರ್ಬಂಧ ರದ್ದುಗೊಳಿಸುವ ಉದ್ದೇಶ ಹೊಂದಿಲ್ಲ ಎಂಬುದು 2 ದೇಶಗಳ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಈ ಮಾತುಕತೆಯನ್ನು ಸಾಧ್ಯವಾದಷ್ಟು ವಿಳಂಬಿಸುವುದು ಅವರ ಉದ್ದೇಶವಾಗಿದೆ’ ಎಂದಿದ್ದಾರೆ.

ಇರಾನ್ ಜತೆಗಿನ ಪರಮಾಣು ಒಪ್ಪಂದ ಮಾತುಕತೆಯಿಂದ ಅಮೆರಿಕ 2018ರಿಂದ ಹಿಂದಕ್ಕೆ ಸರಿದಿದೆ. ಆದರೆ ಆ ಬಳಿಕ ಪರೋಕ್ಷವಾಗಿ 2 ದೇಶಗಳ ನಡುವೆ 6 ಸುತ್ತಿನ ಮಾತುಕತೆ ನಡೆದಿದೆ. ಮುಂದಿನ ವಾರ ನಡೆಯಲಿರುವ ಮತ್ತೊಂದು ಸುತ್ತಿನ ಮಾತುಕತೆಗೆ ಇರಾನ್ ನಿಯೋಗ ಮುಂದಿರಿಸಿರುವ ಬೇಡಿಕೆ ಅವಾಸ್ತವಿಕವಾಗಿದೆ ಎಂದು ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News