ಶ್ರೀಲಂಕಾ: ಅಂತರ್ಯುದ್ಧದಲ್ಲಿ ಮೃತಪಟ್ಟವರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಸೇನೆಯ ತಡೆ; ಪತ್ರಕರ್ತರಿಗೆ ಥಳಿತ

Update: 2021-11-29 17:02 GMT

ಕೊಲಂಬೋ, ನ.29: ದೇಶದಲ್ಲಿ ನಡೆದಿದ್ದ ಅಂತರ್ಯುದ್ಧದಲ್ಲಿ ಮೃತಪಟ್ಟವರ ಸ್ಮರಣಾರ್ಥ ತಮಿಳು ಭಾಷಿಗರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಶ್ರೀಲಂಕಾ ಸೇನೆ ಅಡ್ಡಿಪಡಿಸಿದ್ದು, ಸ್ಮಾರಕಗಳನ್ನು ಧ್ವಂಸಗೊಳಿಸಿದೆ. ಮುಲ್ಲೈತ್ತೀವು ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಥಳಿಸಿವೆ ಎಂದು ಮಾಧ್ಯಮಗಳು ಹಾಗೂ ಸ್ಥಳೀಯರು ಹೇಳಿದ್ದಾರೆ.

ಶ್ರೀಲಂಕಾದಲ್ಲಿ ಹಲವು ದಶಕಗಳ ಕಾಲ ನಡೆದಿದ್ದ ಅಂತರ್ಯುದ್ಧ 2009ರಲ್ಲಿ ಅಂತ್ಯಗೊಂಡಿದೆ. ಈ ಯುದ್ಧದಲ್ಲಿ ಮೃತಪಟ್ಟವರಿಗೆ ಶೃದ್ಧಾಂಜಲಿ ಸಲ್ಲಿಸುವ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಮೃತರ ಸಮಾಧಿಗೆ ಸಂಬಂಧಿಕರು(ತಮಿಳು ಭಾಷಿಗರು) ಮೋಂಬತ್ತಿ ಬೆಳಗಿ ಪುಷ್ಪನಮನ ಮುಲ್ಲೈತ್ತೀವು ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವರದಿಗಾರಿಕೆಗೆಂದು ತೆರಳಿದ್ದ ತಮಿಳು ಪತ್ರಕರ್ತರನ್ನು ಭದ್ರತಾ ಸಿಬಂದಿ ಥಳಿಸಿದ್ದಾರೆ. ಮುಳ್ಳುತಂತಿ ಸುತ್ತಿದ ಕೋಲಿನಿಂದ ಪತ್ರಕರ್ತರನ್ನು ಥಳಿಸಲಾಗಿದೆ ಎಂದು ‘ಫೆಡರೇಷನ್ ಆಫ್ ಮೀಡಿಯಾ ಎಂಪ್ಲಾಯೀಸ್ ಟ್ರೇಡ್ ಯೂನಿಯನ್ಸ್’ ಸೋಮವಾರ ಹೇಳಿದೆ. ಶ್ರೀಲಂಕಾದ ಉತ್ತರ ಮತ್ತು ಪೂರ್ವಭಾಗದಲ್ಲಿ ಅಲ್ಪಸಂಖ್ಯಾತ ತಮಿಳು ಸಮುದಾಯದವರು ವಾಸಿಸುತ್ತಿರುವ ಪ್ರದೇಶದಲ್ಲಿ ಕೆಲಸ ಮಾಡುವ ಪತ್ರಕರ್ತರ ವಿರುದ್ಧ ಭದ್ರತಾ ಪಡೆಗಳು ನಿರಂತರ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.

ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ದೂರಿನ ಬಗ್ಗೆ ವಿಚಾರಣೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಪ್ರತ್ಯೇಕ ತಮಿಳು ದೇಶಕ್ಕಾಗಿ ಶ್ರೀಲಂಕಾದಲ್ಲಿ ಎಲ್‌ಟಿಟಿಇ 37 ವರ್ಷ ನಡೆಸಿದ್ದ ಅಂತರ್ಯುದ್ಧ 2009ರಲ್ಲಿ ಅಂತ್ಯಗೊಂಡಿದೆ. ಈ ಯುದ್ಧದಲ್ಲಿ ಮೃತಪಟ್ಟ ತಮಿಳರ ಗೌರವಾರ್ಥ 1980ರ ಬಳಿಕ ಪ್ರತೀ ವರ್ಷ ನವೆಂಬರ್ 27ರಂದು ‘ಹೀರೋಗಳ ದಿನ’ ವನ್ನು ತಮಿಳರು ಆಚರಿಸುತ್ತಿದ್ದಾರೆ. ಆದರೆ 2019ರಲ್ಲಿ ಅಧಿಕಾರಕ್ಕೆ ಬಂದ ಅಧ್ಯಕ್ಷ ಗೊಟಬಯ ರಾಜಪಕ್ಸ ನೇತೃತ್ವದ ಸರಕಾರ ಈ ಕಾರ್ಯಕ್ರಮವನ್ನು ನಿಷೇಧಿಸಿದೆ.

ಎಲ್‌ಟಿಟಿಇ ವಿರುದ್ಧದ ಹೋರಾಟದಲ್ಲಿ ಶ್ರೀಲಂಕಾದ ಪಡೆಗಳು ಅಂತಿಮ ಗೆಲುವು ಸಾಧಿಸಿದ ಸಂದರ್ಭ ಗೊಟಬಯ ರಾಜಪಕ್ಸ ಸೇನಾಪಡೆಯ ಮುಖ್ಯಸ್ಥರಾಗಿದ್ದರೆ, ಅವರ ಸಹೋದರ ಮಹೀಂದ್ರಾ ರಾಜಪಕ್ಸ ಅಧ್ಯಕ್ಷರಾಗಿದ್ದರು.

ಈ ಅಂತರ್ಯುದ್ಧದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ವಿಶ್ವಸಂಸ್ಥೆ ಅಂದಾಜಿಸಿದ್ದು ಇದರಲ್ಲಿ ಕನಿಷ್ಟ 40,000 ತಮಿಳು ನಾಗರಿಕರು ಎಂದು ಹೇಳಿದೆ. ಆದರೆ ಶ್ರೀಲಂಕಾ ಸರಕಾರ ಇದನ್ನು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News