ದ.ಆಫ್ರಿಕಾ: ಒಮೈಕ್ರಾನ್ ಕೇಂದ್ರಬಿಂದು ತ್ಸವಾನೆಯಲ್ಲಿ ಆಸ್ಪತ್ರೆಗೆ ದಾಖಲಾದವರಲ್ಲಿ 10% ಎಳೆಯ ಶಿಶುಗಳು

Update: 2021-11-30 16:18 GMT
ಸಾಂದರ್ಭಿಕ ಚಿತ್ರ

ಜೊಹಾನ್ಸ್‌ಬರ್ಗ್, ನ.30: ದಕ್ಷಿಣಾ ಆಫ್ರಿಕಾದಲ್ಲಿ ಒಮೈಕ್ರಾನ್ ಸೋಂಕು ಪ್ರಬೇಧದ ಕೇಂದ್ರಬಿಂದು ಎನಿಸಿರುವ ತ್ಸವಾನೆ ನಗರದಲ್ಲಿ ಆಸ್ಪತ್ರೆಗೆ ದಾಖಲಾದ ಸೋಂಕುಪೀಡಿತರಲ್ಲಿ 10%ದಷ್ಟು ಎಳೆಯ ಶಿಶುಗಳಿವೆ ಎಂದು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆ ಹೇಳಿದೆ.

ದೇಶದಲ್ಲಿ ಕೊರೋನ ಸೋಂಕಿನ 4ನೇ ಅಲೆಯ ಆರಂಭಿಕ ಹಂತದಲ್ಲಿ ಆಸ್ಪತ್ರೆಗೆ ದಾಖಲಾದ 2 ವರ್ಷದೊಳಗಿನ ಮಕ್ಕಳ ಪ್ರಮಾಣಕ್ಕೆ ಹೋಲಿಸಿದರೆ ಈಗ ದಾಖಲಾಗುತ್ತಿರುವ ಮಕ್ಕಳ ಪ್ರಮಾಣ ಅತ್ಯಧಿಕವಾಗಿದೆ. ಆದರೆ ಡೆಲ್ಟಾ ರೂಪಾಂತರಿತ ಸೋಂಕು ಉಲ್ಬಣಗೊಂಡಿದ್ದ ಸಂದರ್ಭದಲ್ಲೂ ಎಳೆಯ ಮಕ್ಕಳು ಚಿಕಿತ್ಸೆಗೆ ದಾಖಲಾದ ಪ್ರಮಾಣ ಅತ್ಯಧಿಕವಾಗಿತ್ತು ಎಂದು ಸಂಸ್ಥೆಯ ಸಾರ್ವಜನಿಕ ಆರೋಗ್ಯ ವಿಶೇಷಜ್ಞೆ ವಾಸಿಲಾ ಜಸತ್ ಹೇಳಿದ್ದಾರೆ.

ಎಳೆಯ ಮಕ್ಕಳಲ್ಲಿ ರೋಗ ಪ್ರತಿರೋಧಕ ಶಕ್ತಿ ಇನ್ನೂ ಅಪಕ್ವದ ಸ್ಥಿತಿಯಲ್ಲಿರುತ್ತದೆ ಮತ್ತು ಶಿಶುಗಳಿಗೆ ಲಸಿಕೆ ಹಾಕಿರದ ಕಾರಣ ಅವುಗಳಿಗೆ ಅಪಾಯದ ಪ್ರಮಾಣ ಹೆಚ್ಚಿದೆ . ಆಸ್ಪತ್ರೆಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳವು ಸೋಂಕಿನ ಅಪಾಯದ ಬಗ್ಗೆ ಜನರ ಮನದಲ್ಲಿ ಜಾಗೃತಿ ಮೂಡಿರುವುದರ ದ್ಯೋತಕವಾಗಿದೆ . ಈ ಮಕ್ಕಳಿಗೆ ಸೋಂಕು ತಗುಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ . ಮನೆಯಲ್ಲಿದ್ದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಕ್ಕೆ ಕಷ್ಟವಾಗಬಹುದು ಎಂದು ಎಳೆಯ ಶಿಶುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ವಿಶೇಷವಾಗಿ ಅತ್ಯಂತ ಎಳೆಯ ಶಿಶುಗಳಲ್ಲಿ ಸಾವಿನ ಪ್ರಮಾಣ ಅಧಿಕ ಎಂದು ಜಸತ್ ಹೇಳಿದ್ದಾರೆ.

ಒಮೈಕ್ರಾನ್ ಎಂದು ಹೆಸರಿಸಲಾಗಿರುವ ಕೊರೋನ ಸೋಂಕಿನ ನೂತನ ಪ್ರಬೇಧವನ್ನು ಮೊದಲು ಪತ್ತೆಹಚ್ಚಿದ್ದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು. ಒಮೈಕ್ರಾನ್ ವೈರಸ್ ಅತ್ಯಧಿಕ ವೇಗದಲ್ಲಿ ಪ್ರಸಾರವಾಗುವ ಲಕ್ಷಣ ಹೊಂದಿದೆ ಎಂಬ ವರದಿಯ ಬೆನ್ನಿಗೇ ವಿಶ್ವದ ಹಲವು ದೇಶಗಳಲ್ಲಿ ಅಂತರಾಷ್ಟ್ರೀಯ ವಿಮಾನ ಸಂಚಾರದ ಮೇಲೆ ನಿರ್ಬಂಧ ಜಾರಿಗೊಂಡಿದೆ. ಒಮೈಕ್ರಾನ್‌ನಿಂದ ಮತ್ತೆ ವಿಶ್ವದಾದ್ಯಂತ ಕೊರೋನ ಸೋಂಕು ಉಲ್ಬಣಗೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಪ್ರಿಟೋರಿಯಾ ನಗರ ತ್ಸವಾನೆ ನಗರಪಾಲಿಕೆಯ ವ್ಯಾಪ್ತಿಯಲ್ಲಿದೆ. ತ್ಸವಾನೆ ಪ್ರಾಂತದಲ್ಲಿ ಇದುವರೆಗೆ 2 ವರ್ಷದೊಳಗಿನ 52 ಮಕ್ಕಳಲ್ಲಿ ಕೊರೋನ ಸೋಂಕಿನ ಲಕ್ಷಣ ಕಂಡುಬಂದಿದ್ದು ಇದರಲ್ಲಿ 1 ಮಗು ಮೃತಪಟ್ಟಿದೆ. ಈ ಮಕ್ಕಳು ಒಮೈಕ್ರಾನ್ ಸೋಂಕಿಗೆ ಒಳಪಟ್ಟಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈಗ ಇರುವ ಲಸಿಕೆಗಳು ಸೋಂಕಿನ ತೀವ್ರ ಪರಿಣಾಮದಿಂದ ರಕ್ಷಣೆ ನೀಡಬಹುದು ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಹೇಳಿದ್ದಾರೆ. ದೇಶದ ಮೂರನೇ ಒಂದರಷ್ಟು ಜನ ಪೂರ್ಣಪ್ರಮಾಣದ ಲಸಿಕೆ ಪಡೆದಿದ್ದಾರೆ.

ಆದರೆ ಎಳೆಯ ಮಕ್ಕಳಿಗೆ ಲಸಿಕೆ ನೀಡಲಾಗಿಲ್ಲ. ಡೆಲ್ಟಾ ರೂಪಾಂತರದಿಂದ ಉಂಟಾದ 3ನೇ ಅಲೆಯ ಸಂದರ್ಭ 19 ವರ್ಷದೊಳಗಿನವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ 43% ಏರಿಕೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ದೇಶದಲ್ಲಿ 12ರಿಂದ 17 ವರ್ಷದವರೆಗಿನವರಿಗೆ ಲಸಿಕೆ ನೀಡುವ ಅಭಿಯಾನ ಆರಂಭಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News