ರಾಹುಲ್ ಅವರನ್ನು ಹೊಸ ತಂಡ ಸಂಪರ್ಕಿಸಿದ್ದರೆ ಅದು ಬಿಸಿಸಿಐ ಮಾರ್ಗಸೂಚಿಗೆ ವಿರುದ್ಧ: ಪಂಜಾಬ್ ಕಿಂಗ್ಸ್

Update: 2021-12-01 15:08 GMT
Photo: IPL

ಹೊಸದಿಲ್ಲಿ,ಡಿ.1: ಕಳೆದ ಎರಡು ವರ್ಷಗಳಲ್ಲಿ ನಾಯಕನಾಗಿ 'ಎಲ್ಲ ರೀತಿಯ ಸ್ವಾತಂತ್ರ'ವನ್ನು ಪಡೆದರೂ ಕೆ.ಎಲ್. ರಾಹುಲ್ ತಂಡವನ್ನು ತೊರೆಯುವುದರ ಬಗ್ಗೆ ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ಅಸಮಾಧಾನ ವ್ಯಕ್ತಪಡಿಸಿದೆ. ರಾಹುಲ್‌ರನ್ನು ಹೊಸ ತಂಡವು ಈಗಾಗಲೇ ಸಂಪರ್ಕಿಸಿದ್ದರೆ ಅದು ಬಿಸಿಸಿಐ ಮಾರ್ಗಸೂಚಿಗೆ ವಿರುದ್ಧವಾಗುತ್ತದೆ ಎಂದಿದೆ.

ರಾಹುಲ್ 2020ರ ಋತುವಿನಲ್ಲಿ ಆರ್.ಅಶ್ವಿನ್ ಬದಲಿಗೆ ಪಂಜಾಬ್ ನಾಯಕತ್ವವಹಿಸಿಕೊಂಡಿದ್ದರು. ರಾಹುಲ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರೂ ತಂಡವನ್ನು ಪ್ಲೇ-ಆಫ್‌ಗೆ ತಲುಪಿಸಲು ವಿಫಲರಾಗಿದ್ದರು. ಇದೀಗ ಅವರು ಹೊಸ ಫ್ರಾಂಚೈಸಿ ಲಕ್ನೊದೊಂದಿಗೆ ಸಂಪರ್ಕ ಹೊಂದಿದ್ದಾರೆ ಹಾಗೂ ಆರ್‌ಪಿಎಸ್‌ಐ ಗ್ರೂಪ್ ಒಡೆತನದ ತಂಡವನ್ನು ನಾಯಕನಾಗಿ ಮುನ್ನಡೆಸಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

"ನಾವು ರಾಹುಲ್‌ರನ್ನು ಉಳಿಸಿಕೊಳ್ಳಲು ಬಯಸಿದ್ದೆವು. ಆದರೆ ಅವರು ಹರಾಜಿಗೆ ಮರಳಲು ಬಯಸಿದ್ದರು. ಅದಕ್ಕೂ ಮೊದಲೇ ಅವರನ್ನು ಮತ್ತೊಂದು ಫ್ರಾಂಚೈಸಿ ಸಂಪರ್ಕಿಸಿದ್ದರೆ ಅದು ಅನೈತಿಕವಾಗುತ್ತದೆ'' ಎಂದು ಪಂಜಾಬ್ ಕಿಂಗ್ಸ್ ಸಹ ಮಾಲೀಕ ನೆಸ್ ವಾಡಿಯಾ ಪಿಟಿಐಗೆ ತಿಳಿಸಿದ್ದಾರೆ.

ಲಕ್ನೊದಿಂದ ರಾಹುಲ್‌ಗೆ ಆಮಿಷ ಒಡ್ಡಲಾಗಿದೆ ಎಂಬ ವರದಿಗಳ ಬಗ್ಗೆ ಕೇಳಿದಾಗ, "ಹಾಗೆ ಆಗಿರಲಿಕ್ಕಿಲ್ಲವೆಂದು ಭಾವಿಸುತ್ತೇನೆ. ಏಕೆಂದರೆ ಇದು ಬಿಸಿಸಿಐ ನಿಗದಿಪಡಿಸಿದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ'' ಎಂದರು.

2010ರಲ್ಲಿ ರವೀಂದ್ರ ಜಡೇಜ ಅವರು ತಮ್ಮ ಆಗಿನ ತಂಡ ರಾಜಸ್ಥಾನ ರಾಯಲ್ಸ್‌ನಿಂದ ಬಿಡುಗಡೆಗೊಳ್ಳುವ ಮೊದಲೇ ಇತರ ತಂಡಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಯತ್ನಿಸಿದ್ದಕ್ಕಾಗಿ 1 ವರ್ಷ ಅಮಾನತುಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News