ಅನಿಲ್ ಕುಂಬ್ಳೆ, ಹರ್ಭಜನ್ ದಾಖಲೆ ಮುರಿದ ಅಶ್ವಿನ್

Update: 2021-12-06 05:32 GMT
Photo: BCCI

ಮುಂಬೈ: ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕ್ಯಾಲೆಂಡರ್ ವರ್ಷದಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಅತಿ ಹೆಚ್ಚು ಬಾರಿ (4) ಪಡೆಯುವ ಮೂಲಕ ಸ್ಪಿನ್ ದಂತಕತೆಗಳಾದ ಅನಿಲ್ ಕುಂಬ್ಳೆ ಹಾಗೂ  ಹರ್ಭಜನ್ ಸಿಂಗ್ ದಾಖಲೆಯನ್ನು ಮುರಿದಿದ್ದಾರೆ.

ರವಿವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಎರಡನೇ ಮತ್ತು ಅಂತಿಮ ಟೆಸ್ಟ್‌ನ 3 ನೇ ದಿನದಂದು ಅಶ್ವಿನ್ ಕಿವೀಸ್ ನ  ಹಂಗಾಮಿ ನಾಯಕ ಟಾಮ್ ಟಾಮ್ ಲಥಾಮ್, ವಿಲ್ ಯಂಗ್ ಹಾಗೂ  ರಾಸ್ ಟೇಲರ್ ಅವರನ್ನು ಔಟ್ ಮಾಡಿ 27 ರನ್‌ಗಳಿಗೆ 3 ವಿಕೆಟ್‌ಗಳನ್ನು ಗಳಿಸಿದರು. ಇದರೊಂದಿಗೆ ಐತಿಹಾಸಿಕ ಮೈಲಿಗಲ್ಲು ಸಾಧಿಸಿದರು.

ನಾಲ್ಕನೇ ದಿನವಾದ ಸೋಮವಾರ ಮತ್ತೊಂದು ವಿಕೆಟ್ ಪಡೆದ 34ರ ವಯಸ್ಸಿನ ಅಶ್ವಿನ್ ಈ ಕ್ಯಾಲೆಂಡರ್ ವರ್ಷದಲ್ಲಿ ಇಲ್ಲಿಯವರೆಗೆ 52 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಕಳೆದ ತಿಂಗಳು ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅಶ್ವಿನ್ ಅವರು  ಹರ್ಭಜನ್ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ನ್ಯೂಝಿಲ್ಯಾಂಡ್ ವಿರುದ್ಧ 2 ಪಂದ್ಯಗಳ ಸರಣಿಯಲ್ಲಿ 72 ರನ್ ನೀಡಿ ಒಟ್ಟು 14 ವಿಕೆಟ್ ಗಳನ್ನು ಪಡೆದಿರುವ ಚೆನ್ನೈ ಬೌಲರ್ ಅಶ್ವಿನ್ ಗೆ 'ಸರಣಿಶ್ರೇಷ್ಠ' ಗೌರವ ಒಲಿಯಿತು.

ಕ್ಯಾಲೆಂಡರ್ ವರ್ಷದಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್‌ಗಳು:

4 - ಆರ್ ಅಶ್ವಿನ್ (2015, 2016, 2017, 2021*)

3 - ಅನಿಲ್ ಕುಂಬ್ಳೆ (1999, 2004, 2006)

3 - ಹರ್ಭಜನ್ ಸಿಂಗ್ (2001, 2002, 2008)

2 - ಕಪಿಲ್ ದೇವ್ (1979, 1983)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News