×
Ad

ತಾಲಿಬಾನ್ ಆಡಳಿತದ ಪ್ರದೇಶಗಳಿಗೆ ಮಾನವೀಯ ನೆರವು ವಿಸ್ತರಿಸಿದ ಭಾರತ ‌

Update: 2021-12-11 22:40 IST

ಕಾಬೂಲ್, ಡಿ.11: ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದ ಬಳಿಕ ಭಾರತ ರವಾನಿಸುತ್ತಿರುವ ಪ್ರಥಮ ಮಾನವೀಯ ನೆರವಿನಲ್ಲಿ ಶನಿವಾರ 1.6 ಮೆಟ್ರಿಕ್ ಟನ್‌ಗಳಷ್ಟು ಜೀವರಕ್ಷಕ ಔಷಧವನ್ನು ಮೊದಲ ಕಂತಿನಲ್ಲಿ ಪೂರೈಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಔಷಧ ವಸ್ತುಗಳ ಸರಕು ಹಾಗೂ 10 ಭಾರತೀಯರು, 94 ಅಫ್ಘಾನ್ ಪ್ರಜೆಗಳಿದ್ದ ವಿಮಾನ ಶುಕ್ರವಾರ ದಿಲ್ಲಿಯಿಂದ ಕಾಬೂಲ್‌ಗೆ ಪ್ರಯಾಣಿಸಿದೆ. ಈ ನೆರವು ಭಾರತದ ಜನರಿಂದ ದೊರಕಿರುವ ಉಡುಗೊರೆಯಾಗಿದ್ದು ಕಷ್ಟಕಾಲದಲ್ಲಿ ಅಫ್ಗಾನ್‌ನ ಹಲವು ಕುಟುಂಬಗಳಿಗೆ ನೆರವಾಗಲಿದೆ ಎಂದು ಅಫ್ಘಾನ್ ರಾಯಭಾರಿ ಫರೀದ್ ಮಮೂನ್‌ದ್ಝಾಯ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಭಾರತ ಸರಕಾರ ಮಾನವೀಯ ನೆರವಿನ ಪ್ರಥಮ ಕಂತಿನಲ್ಲಿ ಔಷಧ ವಸ್ತುಗಳನ್ನು ರವಾನಿಸಿದೆ. ಕಾಬೂಲ್‌ನಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳಿಗೆ ಔಷಧ ಸರಕನ್ನು ಹಸ್ತಾಂತರಿಸಲಾಗುವುದು ಮತ್ತು ಕಾಬೂಲ್‌ನಲ್ಲಿ ನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಬಳಸಲಾಗುವುದು ಎಂದು ಭಾರತದ ವಿದೇಶ ವ್ಯವಹಾರ ಸಚಿವಾಲಯ ಹೇಳಿದೆ.

ಅಫ್ಘಾನ್‌ನಲ್ಲಿರುವ ತೀವ್ರ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆ ದೇಶಕ್ಕೆ ಅಡೆತಡೆಯಿಲ್ಲದ ಮಾನವೀಯ ನೆರವು ಒದಗಿಸಬೇಕೆಂದು ಭಾರತ ಪ್ರತಿಪಾದಿಸುತ್ತಿದೆ. ಇದೇ ವೇಳೆ, ಅಫ್ಘಾನ್‌ನಲ್ಲಿ ಎಲ್ಲರನ್ನೂ ಒಳಗೊಂಡ ನೈಜ ಸರಕಾರ ರಚನೆಯಾಗಬೇಕು ಮತ್ತು ಆ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಆಸ್ಪದ ನೀಡಬಾರದು ಎಂದು ಭಾರತ ಆಗ್ರಹಿಸುತ್ತಿದೆ.

ಭಾರತದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಲ್ಪಸಂಖ್ಯಾತ ಸಮುದಾಯದವರ ಸಹಿತ ಅಫ್ಘಾನ್ ಪ್ರಜೆಗಳು ಔಷಧ ಸರಕನ್ನು ಒಯ್ದ ವಿಮಾನದಲ್ಲಿ ಸ್ವದೇಶಕ್ಕೆ ಮರಳಿದ್ದಾರೆ. ಆಪರೇಷನ್ ದೇವಿಶಕ್ತಿ ಅಭಿಯಾನದಡಿ ಈ ಪ್ರಜೆಗಳನ್ನು ಕಾಬೂಲ್ ಗೆ ಕರೆದೊಯ್ಯಲಾಗಿದೆ. ಅಫ್ಘಾನ್ ಮೇಲೆ ತಾಲಿಬಾನ್‌ಗಳು ನಿಯಂತ್ರಣ ಸಾಧಿಸಿದ ಬಳಿಕ, ಅಲ್ಲಿರುವ ಭಾರತೀಯರನ್ನು ಹಾಗೂ ಅಫ್ಘಾನಿಸ್ತಾನೀಯರನ್ನು ತೆರವುಗೊಳಿಸುವ ಸಲುವಾಗಿ ಆಗಸ್ಟ್ 15ರಿಂದ ಆಪರೇಷನ್ ದೇವಿಶಕ್ತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಆಗಸ್ಟ್‌ನಲ್ಲಿ438 ಭಾರತೀಯರ ಸಹಿತ 565 ಜನರನ್ನು ಸ್ಥಳಾಂತರಿಸಲಾಗಿದೆ.

ರಸ್ತೆ ಮಾರ್ಗವಾಗಿ ಪಾಕ್ ಮೂಲಕ ಅಫ್ಘಾನ್ ಗೆ 50,000 ಟನ್‌ಗಳಷ್ಟು ಗೋಧಿ ಮತ್ತು ಔಷಧ ಪೂರೈಸುವುದಾಗಿ ಭಾರತ ಈಗಾಗಲೇ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News