ಚೀನಾ, ಮ್ಯಾನ್ಮಾರ್, ಉ.ಕೊರಿಯಾದ ಮೇಲೆ ಮಾನವಹಕ್ಕು ನಿರ್ಬಂಧ ವಿಧಿಸಿದ ಅಮೆರಿಕ
ವಾಷಿಂಗ್ಟನ್, ಡಿ.11: ಚೀನಾ, ಮ್ಯಾನ್ಮಾರ್, ಉ.ಕೊರಿಯಾ ಮತ್ತು ಬಾಂಗ್ಲಾದೇಶದೊಂದಿಗೆ ಸಂಬಂಧ ಹೊಂದಿರುವ ಹಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳ ಮೇಲೆ ಅಮೆರಿಕ ಶುಕ್ರವಾರ ವ್ಯಾಪಕ ಮಾನವಹಕ್ಕು ಸಂಬಂಧಿತ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಜತೆಗೆ, ಚೀನಾದ ಕೃತಕ ಬುದ್ಧಿಮತ್ತೆ ಸಂಸ್ಥೆ ಸೆನ್ಸ್‌ಟೈಮ್ ಸಮೂಹ ಸಂಸ್ಥೆಯನ್ನು ಹೂಡಿಕೆ ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಿದೆ.
ಈ ಮಧ್ಯೆ, ವ್ಯಾಪಕ ಮಾನವ ಹಕ್ಕು ಉಲ್ಲಂಘನೆ ಪ್ರಕರಣ ವರದಿಯಾಗಿರುವ ಮ್ಯಾನ್ಮಾರ್ ವಿರುದ್ಧ ಕೆನಡಾ ಮತ್ತು ಬ್ರಿಟನ್ ಕೂಡಾ ನಿರ್ಬಂಧ ವಿಧಿಸಿದೆ. ಉತ್ತರ ಕೊರಿಯಾ ವಿರುದ್ಧ ಜಾರಿಯಾಗಿರುವ ಹೊಸ ನಿರ್ಬಂಧ ಬೈಡನ್ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ವಿಧಿಸಿರುವ ಪ್ರಥಮ ನಿರ್ಬಂಧ ಕ್ರಮವಾಗಿದೆ.
ನಾವು ಈ ದಿನ ಕೈಗೊಂಡಿರುವ ಕ್ರಮಗಳು, ವಿಶೇಷವಾಗಿ ಬ್ರಿಟನ್ ಮತ್ತು ಕೆನಡಾದ ಸಹಯೋಗದಲ್ಲಿ ಕೈಗೊಂಡ ಕ್ರಮಗಳು, ಅಧಿಕಾರ ದುರುಪಯೋಗ ಪಡಿಸಿಕೊಂಡು ಅಮಾಯಕರ ದಮನ ಮತ್ತು ತೊಂದರೆ ನೀಡುವ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ವಿಶ್ವದ ಪ್ರಜಾಪ್ರಭುತ್ವ ಕ್ರಮ ಕೈಗೊಳ್ಳಲಿದೆ ಎಂಬ ಸಂದೇಶ ರವಾನಿಸಿದೆ ಎಂದು ಅಮೆರಿಕ ಖಜಾನೆ ಇಲಾಖೆಯ ಸಹಾಯಕ ಕಾರ್ಯದರ್ಶಿ ವ್ಯಾಲಿ ಅಡ್ಯೆಮೊ ಹೇಳಿದ್ದಾರೆ.
ಅಮೆರಿಕದ ಕ್ರಮವನ್ನು ವಾಷಿಂಗ್ಟನ್‌ನಲ್ಲಿನ ಚೀನಾದ ರಾಯಭಾರ ಕಚೇರಿ ಖಂಡಿಸಿದೆ. ಇದು ಚೀನಾದ ಆಂತರಿಕ ವ್ಯವಹಾರದಲ್ಲಿ ಗಂಭೀರವಾದ ಹಸ್ತಕ್ಷೇಪವಾಗಿದೆ ಮತ್ತು ಅಂತರಾಷ್ಟ್ರೀಯ ಸಂಬಂಧಕ್ಕೆ ಸಂಬಂಧಿಸಿದ ಮೂಲ ನಿಯಮದ ತೀವ್ರ ಉಲ್ಲಂಘನೆಯಾಗಿದೆ. ಈ ಕ್ರಮ ಚೀನಾ-ಅಮರಿಕ ಸಂಬಂಧಕ್ಕೆ ಹಾನಿ ತರಬಹುದು ಎಂದು ರಾಯಭಾರಿ ಕಚೇರಿಯ ವಕ್ತಾರ ಲಿಯು ಪೆಂಗ್ಯು ಪ್ರತಿಕ್ರಿಯಿಸಿದ್ದು ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಅಮೆರಿಕದಲ್ಲಿರುವ ಉತ್ತರ ಕೊರಿಯಾ ನಿಯೋಗ ಮತ್ತು ಮ್ಯಾನ್ಮಾರ್ , ಬಾಂಗ್ಲಾದ ರಾಯಭಾರಿ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆಧಾರರಹಿತ ಆರೋಪದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು , ಇದನ್ನು ಹಾಗೂ ತನ್ನ ವಿರುದ್ಧದ ಆರೋಪವನ್ನು ತೀವ್ರವಾಗಿ ಖಂಡಿಸುವುದಾಗಿ ಚೀನಾದ ಕೃತಕ ಬುದ್ಧಿಮತ್ತೆ ಸಂಸ್ಥೆ ಸೆನ್ಸ್ ಟೈಮ್ ಪ್ರತಿಕ್ರಿಯಿಸಿದೆ. ನಾವು ವ್ಯವಹಾರ ನಡೆಸುವ ಪ್ರದೇಶದಲ್ಲಿ ಅಲ್ಲಿನ ಕಾನೂನು, ನಿಯಮವನ್ನು ಪಾಲಿಸುತ್ತಾ ಬಂದಿದ್ದೇವೆ ಎಂದು ಸಂಸ್ಥೆ ಹೇಳಿದೆ. ಅಮೆರಿಕದ ಖಜಾನೆ ಇಲಾಖೆ ಸೆನ್ಸ್ ಟೈಮ್ ಅನ್ನು ಚೀನಾದ ಮಿಲಿಟರ-ಕೈಗಾರಿಕೆ ಸಂಕೀರ್ಣ ಪಟ್ಟಿ’ಯಲ್ಲಿ ಸೇರಿಸಿದೆ. ಈ ಸಂಸ್ಥೆ ಜನಾಂಗೀಯತೆಯನ್ನು ನಿರ್ಧರಿಸುವ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು ಈ ವ್ಯವಸ್ಥೆ ಉಯಿಗರ್ ಮುಸ್ಲಿಮರನ್ನು ಗುರುತಿಸುವಲ್ಲಿ ನೆರವಾಗುತ್ತದೆ. ಆದ್ದರಿಂದ ಈ ಸಂಸ್ಥೆಯಲ್ಲಿ ಅಮೆರಿಕದ ಹೂಡಿಕೆಯನ್ನು ನಿಷೇಧಿಸಲಾಗಿದೆ ಎಂದು ಅಮೆರಿಕ ಹೇಳಿದೆ. ಈ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಶೇರು ಮಾರ್ಕೆಟ್‌ನಲ್ಲಿ ಸೆನ್ಸ್‌ಟೈಮ್‌ನ ಶೇರುಗಳ ಮೌಲ್ಯ ಕುಸಿದಿದೆ ಎಂದು ವರದಿಯಾಗಿದೆ.
‘ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ 100ಕ್ಕೂ ಹೆಚ್ಚು ಮುಖಂಡರು ಮಾಡಿದ ಬದ್ಧತೆಯಿಂದ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ನಿರಂಕುಶ ಆಡಳಿತಕ್ಕೆ ಹಿನ್ನಡೆಯಾಗಲಿದೆ’ ಎಂದು ಪ್ರಜಾಪ್ರಭುತ್ವದ ವಿಷಯಕ್ಕೆ ಸಂಬಂಧಿಸಿ 2 ದಿನ ನಡೆದ ವರ್ಚುವಲ್ ಶೃಂಗಸಭೆ ಬಳಿಕ ಅಮೆರಿಕದ ಅಧ್ಯಕ್ಷ ಬೈಡನ್ ಹೇಳಿದ್ದರು.