×
Ad

ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಹೇಳಿಕೆ ಆತಂಕಕಾರಿ: ಪಾಕಿಸ್ತಾನ ಖಂಡನೆ

Update: 2021-12-28 21:44 IST
ಇಮ್ರಾನ್ ಖಾನ್

ಇಸ್ಲಾಮಾಬಾದ್, ಡಿ.28: ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಸಮಾವೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುವ ದ್ವೇಷದ ಹೇಳಿಕೆ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನ ಭಾರತದ ವಿದೇಶ ವ್ಯವಹಾರ ಇಲಾಖೆಯ ಅಧಿಕಾರಿಯನ್ನು ಕರೆಸಿಕೊಂಡು ತೀವ್ರ ಆತಂಕ ಸೂಚಿಸಿದೆ ಎಂದು ವರದಿಯಾಗಿದೆ.

ಹರಿದ್ವಾರದ ವೇದ ನಿಕೇತನ ಧಾಮ್ ನಲ್ಲಿ ಡಿಸೆಂಬರ್ 17ರಿಂದ 20ರವರೆಗೆ ಜುನಾ ಆಖಾಡದ ಯತಿ ನರಸಿಂಹಾನಂದ ಗಿರಿ ನೇತೃತ್ವದಲ್ಲಿ ಈ ಸಮಾವೇಶ ಆಯೋಜಿಸಲಾಗಿತ್ತು. ದ್ವೇಷದ ಹೇಳಿಕೆ ಮತ್ತು ಮುಸ್ಲಿಮರ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡಿದ ಆರೋಪ ಗಿರಿ ವಿರುದ್ಧ ಈಹಿಂದೆಯೇ ಕೇಳಿಬಂದಿದೆ. ಸಮಾವೇಶದಲ್ಲಿ ಮಾತನಾಡಿದ ಹಲವು ಭಾಷಣಗಾರರು ಪ್ರಚೋದನಕಾರಿ ಹೇಳಿಕೆ ನೀಡಿದ್ದರಲ್ಲದೆ ಅಲ್ಪಸಂಖ್ಯಾತ ಸಮುದಾಯದವರನ್ನು ಹತ್ಯೆ ಮಾಡಬೇಕೆಂದು ಕರೆ ನೀಡಿದ್ದರು. ಇಂತಹ ಹೇಳಿಕೆ ದೇಶದ ನಾಗರಿಕ ಸಮಾಜದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ಪಾಕಿಸ್ತಾನ ಖಂಡಿಸಿದೆ.

ಇಂತಹ ಹೇಳಿಕೆಗಾಗಿ ಕಾರ್ಯಕ್ರಮ ಆಯೋಜಕರು ವಿಷಾದ ವ್ಯಕ್ತಪಡಿಸಿಲ್ಲ ಅಥವಾ ಅವರ ವಿರುದ್ಧ ಭಾರತ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಪಾಕಿಸ್ತಾನದ ವಿದೇಶ ವ್ಯವಹಾರ ಇಲಾಖೆ ಹೇಳಿಕೆ ನೀಡಿದೆ. ಭಾರತದಲ್ಲಿ ಮುಸ್ಲಿಮರ ವಿರುದ್ಧದ ನಿರಂತರ ಹಿಂಸಾಚಾರವು ಇಸ್ಲಮೊಫೋಬಿಯಾದ ಹದಗೆಡುತ್ತಿರುವ ಪ್ರವೃತ್ತಿಯ ದ್ಯೋತಕವಾಗಿದೆ ಮತ್ತು ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿಯ ಕರಾಳ ಚಿತ್ರಣವಾಗಿದೆ. ಅಲ್ಪಸಂಖ್ಯಾತರ ವಿರುದ್ಧದ ಈ ರೀತಿಯ ದ್ವೇಷದ ಮಾತಿನ ಕುರಿತು ಭಾರತ ತನಿಖೆ ನಡೆಸಿ ಈ ರೀತಿಯ ಪ್ರಕರಣ ಭವಿಷ್ಯದಲ್ಲಿ ಪುನರಾವರ್ತನೆಯಾಗದಂತೆ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳುವುದೆಂದು ನಿರೀಕ್ಷಿಸಲಾಗಿದೆ ಎಂದು ಇಲಾಖೆ ಹೇಳಿದೆ.

ಹರಿದ್ವಾರದಲ್ಲಿ ನಡೆದಿದ್ದ ಧರ್ಮ ಸಂಸದ್‌ನಲ್ಲಿ ನೀಡಿರುವ ದ್ವೇಷದ ಹೇಳಿಕೆಯನ್ನು ಕಾಂಗ್ರೆಸ್, ಟಿಎಂಸಿ ಸೇರಿಂತೆ ಭಾರತದಲ್ಲಿ ಹಲವರು ಖಂಡಿಸಿದ್ದು ಈ ಪ್ರಕರಣದಲ್ಲಿ ಶಾಮೀಲಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಿತೇಂದ್ರ ನಾರಾಯಣ್ ತ್ಯಾಗಿ ಸಹಿತ ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News