×
Ad

ಕೊರೋನ: ಜಾಗತಿಕ ದೈನಂದಿನ ಪ್ರಕರಣ ದಾಖಲೆ ಮಟ್ಟಕ್ಕೆ ಏರಿಕೆ‌

Update: 2021-12-28 22:22 IST
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಡಿ.28: ಕೊರೋನ ಸೋಂಕಿನ ಪ್ರಥಮ ಪ್ರಕರಣ ವರದಿಯಾದ 2 ವರ್ಷದ ಬಳಿಕ, ಸೋಂಕಿಗೆ ಲಸಿಕೆ ಸಿದ್ಧಗೊಂಡ 1 ವರ್ಷದ ಬಳಿಕ ಸೋಮವಾರ ಕೊರೋನ ಸೋಂಕಿನ ಜಾಗತಿಕ ದೈನಂದಿನ ಪ್ರಕರಣ ದಾಖಲೆ ಮಟ್ಟಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಮವಾರ ವಿಶ್ವದಾದ್ಯಂತ 1.44 ಮಿಲಿಯನ್‌ಗೂ ಅಧಿಕ ಸೋಂಕು ಪ್ರಕರಣ ದಾಖಲಾಗಿದ್ದು ಇದು 2020ರಲ್ಲಿ ಟರ್ಕಿಯಲ್ಲಿ ದಾಖಲಾದ ಪ್ರಮಾಣಕ್ಕಿಂತ ಅಧಿಕವಾಗಿದೆ. ಜತೆಗೆ, ಏಳು ದಿನದ ಸರಾಸರಿ ಸೋಂಕಿನ ಪ್ರಮಾಣವೂ ದಾಖಲೆ ಮಟ್ಟಕ್ಕೇರಿದ್ದು ಇದಕ್ಕೆ ಒಮೈಕ್ರಾನ್ ಸೋಂಕು ಮೂಲ ಕಾರಣವಾಗಿದೆ. 

ಸೋಮವಾರದವರೆಗೆ(ಡಿ.27) ದಾಖಲಾದ 7 ದಿನಗಳ ಸರಾಸರಿ ಪ್ರಮಾಣ 8,41,000 ದಾಟಿದ್ದು ಒಂದು ತಿಂಗಳ ಹಿಂದೆ (ಆಫ್ರಿಕಾದಲ್ಲಿ ಒಮೈಕ್ರಾನ್ ಪ್ರಥಮ ಬಾರಿಗೆ ಪತ್ತೆಯಾದಂದಿನಿಂದ) ದಾಖಲಾದ ಪ್ರಮಾಣಕ್ಕಿಂತ 49% ಅಧಿಕವಾಗಿದೆ. ಸರಣಿ ರಜಾದಿನಗಳ ಹಿನ್ನೆಲೆಯಲ್ಲಿ ಸೋಂಕಿನ ಪ್ರಮಾಣ ಉಲ್ಬಣಗೊಳ್ಳಬಹುದು ಹಾಗೂ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಬಹುದು ಎಂದು ಸರಕಾರಗಳು ಈಗಾಗಲೇ ಎಚ್ಚರಿಕೆ ನೀಡಿದ್ದು ವಿಶ್ವವು ಸತತ 3ನೇ ವರ್ಷವೂ ಕೊರೋನ ಸೋಂಕಿನ ಅಪಾಯದಡಿ ಸಿಲುಕುವ ಸಾಧ್ಯತೆಗಳು ಗೋಚರಿಸುತ್ತಿವೆ ಎಂದು ತಜ್ಞರು ಹೇಳಿದ್ದಾರೆ.

ಆದರೆ ಕೊರೋನ ಸೋಂಕಿಗೆ ಸಂಬಂಧಿಸಿ ದೈನಂದಿನ ಸಾವಿನ ಪ್ರಕರಣ ಗಣನೀಯವಾಗಿ ಏರಿಕೆಯಾಗಿಲ್ಲ ಎಂಬುದು ತುಸು ಸಮಾಧಾನ ತರುವ ವಿಷಯವಾಗಿದೆ. ಈ ವರ್ಷದ ಅಕ್ಟೋಬರ್ ಮಧ್ಯಭಾಗದಿಂದ ದೈನಂದಿನ ಸಾವಿನ ಸರಾಸರಿ ಪ್ರಮಾಣ ಸುಮಾರು 7000ದಲ್ಲಿ ಸ್ಥಿರವಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News