ಇರಾಕ್ ಯುದ್ಧದ ಕುರಿತ ರಹಸ್ಯ ದಾಖಲೆಯನ್ನು ಸುಟ್ಟುಹಾಕಲು ಸೂಚಿಸಿದ್ದ ಟೋನಿ ಬ್ಲೇರ್: ಮಾಜಿ ಕಾರ್ಯದರ್ಶಿ ಹೇಳಿಕೆ‌

Update: 2022-01-05 16:30 GMT
ಟೋನಿ ಬ್ಲೇರ್(photo:twitter)

ಲಂಡನ್, ಜ.5: ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಗೆ ನೀಡಲಾಗಿರುವ ನೈಟ್ ಪದವಿಯನ್ನು ರದ್ದುಪಡಿಸುವಂತೆ ನಡೆಯುತ್ತಿರುವ ಅಭಿಯಾನವನ್ನು ಉತ್ತೇಜಿಸುವಂತಹ ಹೇಳಿಕೆಯನ್ನು ನೀಡಿರುವ ಬ್ರಿಟನ್‌ನ  ಮಾಜಿ ರಕ್ಷಣಾ ಕಾರ್ಯದರ್ಶಿ ಜೆಫ್ ಹೂನ್, ಇರಾಕ್ ಯುದ್ಧಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಯನ್ನು ಸುಟ್ಟುಹಾಕುವಂತೆ ಆಗ ಪ್ರಧಾನಿಯಾಗಿದ್ದ ಬ್ಲೇರ್ ಸೂಚಿಸಿದ್ದರು ಎಂದಿದ್ದಾರೆ.

ತಾವು ಬರೆದಿರುವ ‘ಸೀ ಹೌ ದೆ ರನ್’  ಎಂಬ ಪುಸ್ತಕದಲ್ಲಿ ಹೂನ್, ಬ್ಲೇರ್ ಆಡಳಿತಾವಧಿಯಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಜೊನಾಥನ್ ಪೊವೆಲ್, ದಾಖಲೆಯನ್ನು ಸುಟ್ಟುಹಾಕುವಂತೆ ತನ್ನ ಆಪ್ತ ಕಾರ್ಯದರ್ಶಿಗೆ ಸೂಚಿಸಿದ್ದರು ಎಂದಿದ್ದಾರೆ. 2015ರಲ್ಲಿ ಈ ಆರೋಪ ಕೇಳಿ ಬಂದಾಗ ಇದು ಅಸಂಬದ್ಧ ವರದಿ ಎಂದು ಬ್ಲೇರ್ ತಳ್ಳಿಹಾಕಿದ್ದರು. ಆದರೆ ಇದೀಗ ಹೂನ್ ತಮ್ಮ ನಿಲುವನ್ನು ಬರಹ ರೂಪದಲ್ಲಿ ವಿವರವಾಗಿ ದಾಖಲಿಸಿದ್ದಾರೆ.

ಪೊವೆಲ್ ಅವರ ಸೂಚನೆಯಿಂದ ರಕ್ಷಣಾ ಇಲಾಖೆಯ ಅಧಿಕಾರಿಗಳು ಆಘಾತಗೊಂಡರು. ಆದರೆ ಸುಟ್ಟುಹಾಕುವ ಆದೇಶವನ್ನು ಕಡೆಗಣಿಸಿ, ಆ ದಾಖಲೆಯನ್ನು ಸುರಕ್ಷಿತವಾಗಿ ಕಾಯ್ದಿರಿಸುವ ನಿರ್ಧಾರಕ್ಕೆ ಬಂದರು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ. ಸಂಘರ್ಷದ ಕಾನೂನುಬದ್ಧತೆಯ ಬಗ್ಗೆ ಅಂದಿನ ಅಟಾರ್ನಿ ಜನರಲ್ ಲಾರ್ಡ್ ಗೋಲ್ಡ್ ಸ್ಮಿತ್ ನೀಡಿದ್ದ ರಹಸ್ಯ ಸಲಹೆಯ ಇದಾಗಿತ್ತು. ಆದರೆ ಕೆಲ ದಿನಗಳ ಬಳಿಕ ತನ್ನ ನಿಲುವು ಬದಲಿಸಿದ ಗೋಲ್ಡ್ ಸ್ಮಿತ್ ಯುದ್ಧದಲ್ಲಿ ಬ್ರಿಟಿಷ್ ಸೇನೆ ಪಾಲ್ಗೊಳ್ಳಲು ಹಸಿರು ನಿಶಾನೆ ತೋರಿದ್ದರು.

ಯುದ್ಧವನ್ನು ಬೆಂಬಲಿಸುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಜತೆ ಟೋನಿ ಬ್ಲೇರ್ ರಕ್ತದ ಒಪ್ಪಂದಕ್ಕೆ ಸಹಿ ಹಾಕಿದರು . ಯುದ್ಧವನ್ನು ವಿರೋಧಿಸುವ ನಿಲುವು ತಳೆದಿದ್ದು ತನ್ನ ರಾಜಕೀಯ ಪತನಕ್ಕೆ ನಾಂದಿ ಹಾಡಿತು . ಜನರ ವಿರೋಧ ಕಟ್ಟಿಕೊಂಡ ಆಕ್ರಮಣದ ಆಪಾದನೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ ಬ್ಲೇರ್ ತನ್ನನ್ನು ವಜಾಗೊಳಿಸಿದರು ಎಂದು ಮುಂಚೂಣಿ ರಾಜಕೀಯದಿಂದ ನಿವೃತ್ತರಾಗಿರುವ ಹೂನ್ ಪ್ರತಿಪಾದಿಸಿದ್ದಾರೆ.

ಇರಾಕ್‌ನಲ್ಲಿ  ಬ್ರಿಟನ್ ಸೇನೆ ನಿಯೋಜನೆಗೆ ಪೂರಕವಾದ ಯಾವುದೇ ತೃಪ್ತಿಕರ ಕಾನೂನು ಆಧಾರ ಇಲ್ಲ ಎಂದು ಇರಾಕ್ ಯುದ್ಧದ ಕುರಿತು ಅಧಿಕೃತ ಪರಿಶೀಲನೆಗೆ ನೇಮಿಸಿದ ಚಿಲ್ಕಾಟ್‌ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News