ಪಾಕಿಸ್ತಾನ: ಪೊಲೀಸರ ಕಾರ್ಯಾಚರಣೆಯಲ್ಲಿ 6 ಐಸಿಸ್ ಉಗ್ರರ ಹತ್ಯೆ

Update: 2022-01-10 16:52 GMT
ಸಾಂದರ್ಭಿಕ ಚಿತ್ರ:PTI

ಇಸ್ಲಮಾಬಾದ್, ಜ.10: ಪಾಕಿಸ್ತಾನದ ಕ್ವೆಟಾ ಪ್ರಾಂತದಲ್ಲಿ ಶನಿವಾರ ಶಂಕಿತ ಐಸಿಸ್-ಕೆ ಉಗ್ರರ ಅಡಗುದಾಣದ ಮೇಲೆ ಪೊಲೀಸರು ನಡೆಸಿದ ದಾಳಿಯಲ್ಲಿ 6 ಉಗ್ರರು ಹತರಾಗಿದ್ದು ಕೆಲವರು ತಪ್ಪಿಕೊಂಡು ಪರಾರಿಯಾಗಿದ್ದಾರೆ. ಅವರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಪರಾರಿಯಾಗಿರುವ ಶಂಕಿತ ಉಗ್ರರು ತಲೆಮರೆಸಿಕೊಂಡಿರಬಹುದಾದ ಹಲವು ಅಡಗುತಾಣಗಳನ್ನು ಗುರುತಿಸಲಾಗಿದ್ದು ಅವುಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮುಂದುವರಿದಿದೆ ಎಂದು ಭಯೋತ್ಪಾದನೆ ನಿಗ್ರಹ ಪೊಲೀಸ್ ಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತಪಟ್ಟವರಲ್ಲಿ ಇಸ್ಲಾಮಿಕ್ ಸ್ಟೇಟ್-ಖೊರಸಾನ್(ಐಸಿಸ್-ಕೆ)ಯ ಪ್ರಾದೇಶಿಕ ವಿಭಾಗದ ಜ್ಯೂನಿಯರ್ ಕಮಾಂಡರ್ ಅಸ್ಘರ್ ಸುಮಲಾನಿಯೂ ಸೇರಿದ್ದಾನೆ. ಈತನ ತಲೆಗೆ 2 ಮಿಲಿಯನ್ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ವರದಿಯಾಗಿದೆ.

ಪಾಕಿಸ್ತಾನದಲ್ಲಿ ಐಸಿಸ್-ಕೆ ಉಗ್ರರ ಉಪಸ್ಥಿತಿಯನ್ನು ಈ ಹಿಂದಿನಿಂದಲೂ ಪಾಕ್ ಅಧಿಕಾರಿಗಳು ನಿರಾಕರಿಸುತ್ತಾ ಬಂದಿದ್ದರು. ಪಾಕಿಸ್ತಾನ್ ಐಸಿಸ್ ಸಕ್ರಿಯವಾಗಿಲ್ಲ ಎಂದು ಕಳೆದ ವಾರ ಪಾಕ್ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಬಾಬರ್ ಇಫ್ತಿಕಾರ್ ಪ್ರತಿಪಾದಿಸಿದ್ದರು. ಆದರೆ ಈ ಸಂಘಟನೆ ಪಾಕ್‌ನಲ್ಲಿ ನಡೆದ ಹಲವು ಮಾರಣಾಂತಿಕ ದಾಳಿಗಳ ಹೊಣೆಯನ್ನು ಹೊತ್ತುಕೊಂಡಿದೆ. ಪಾಕ್ ಗಡಿಭಾಗಕ್ಕೆ ಹೊಂದಿಕೊಂಡಿರುವ ಅಫ್ಘಾನ್‌ನ ಪೂರ್ವ ಪ್ರಾಂತದ ಹಲವು ಪ್ರದೇಶಗಳಲ್ಲಿ ಐಸಿಸ್-ಕೆ ಸಂಘಟನೆ ಆಳವಾಗಿ ಬೇರೂರಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆಗಸ್ಟ್‌ನಲ್ಲಿ ನಡೆದ ಬಾಂಬ್ ದಾಳಿಯನ್ನೂ ಈ ಸಂಘಟನೆಯೇ ನಡೆಸಿದ್ದು ಇದರಲ್ಲಿ ಅಮೆರಿಕದ 13 ಸಿಬ್ಬಂದಿ ಸಹಿತ ಹಲವರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News