ಮ್ಯಾನ್ಮಾರ್: ಆಂಗ್ ಸೂಕಿಗೆ ಮತ್ತೆ 4 ವರ್ಷ ಜೈಲುಶಿಕ್ಷೆ

Update: 2022-01-10 17:16 GMT
ಆಂಗ್ ಸಾನ್ ಸೂಕಿ

ಯಾಂಗಾನ್, ಜ.10: ಕಾನೂನುಬಾಹಿರವಾಗಿ ಆಮದು ಮಾಡಿಕೊಂಡ ವಾಕಿಟಾಕಿಗಳನ್ನು ಹೊಂದಿರುವ ಮತ್ತು ಕೊರೋನ ಸೋಂಕಿನ ವಿರುದ್ಧದ ನಿರ್ಬಂಧಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಕೊಂಡ ಬಳಿಕ ಮ್ಯಾನ್ಮಾರ್ ನ ಉಚ್ಛಾಟಿತ ನಾಯಕಿ ಆಂಗ್ ಸಾನ್ ಸೂಕಿಗೆ ಮ್ಯಾನ್ಮಾರ್‌ನ ನ್ಯಾಯಾಲಯ ಸೋಮವಾರ 4 ವರ್ಷದ ಜೈಲುಶಿಕ್ಷೆ ವಿಧಿಸಿದೆ ಎಂದು ಕಾನೂನು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ತಿಂಗಳು ಇತರ 2 ಪ್ರಕರಣಗಳಲ್ಲಿ ಸೂಕಿಗೆ 4 ವರ್ಷದ ಜೈಲುಶಿಕ್ಷೆಯಾಗಿತ್ತು. ಬಳಿಕ ಅಲ್ಲಿನ ಸೇನಾಡಳಿತ ಈ ಶಿಕ್ಷೆಯನ್ನು 2 ವರ್ಷಕ್ಕೆ ಇಳಿಸಿತ್ತು. ಕಳೆದ ವರ್ಷದ ಫೆಬ್ರವರಿಯಲ್ಲಿ ಸೂಕಿ ನೇತೃತ್ವದ ಚುನಾಯಿತ ಸರಕಾರವನ್ನು ಪದಚ್ಯುತಗೊಳಿಸಿದ್ದ ಸೇನೆ ಅಧಿಕಾರ ವಶಪಡಿಸಿಕೊಂಡು ಸೂಕಿ ವಿರುದ್ಧ ಹಲವು ಪ್ರಕರಣ ದಾಖಲಿಸಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಅವರು ದೋಷಿಯೆಂದು ಸಾಬೀತಾದರೆ ಅವರಿಗೆ 100 ವರ್ಷ ಜೈಲುಶಿಕ್ಷೆಯಾಗಬಹುದು. ಸೇನೆಯ ಕ್ರಮಗಳನ್ನು ನ್ಯಾಯಸಮ್ಮತಗೊಳಿಸಲು ಮತ್ತು ಸೂಕಿ ಮತ್ತೆ ರಾಜಕೀಯಕ್ಕೆ ಮರಳದಂತೆ ತಡೆಯಲು ಈ ಪ್ರಕರಣ ದಾಖಲಿಸಲಾಗಿದೆ ಎಂದು ಸೂಕಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಯಾಂಗಾನ್‌ನ ನ್ಯಾಯಾಲಯ ನೀಡಿದ ತೀರ್ಪಿನ ಪ್ರಕಾರ, ಅಕ್ರಮವಾಗಿ ವಾಕಿಟಾಕಿ ಆಮದು ಮಾಡಿಕೊಂಡು ಬಳಸಿದ್ದಕ್ಕೆ 2 ವರ್ಷದ ಜೈಲುಶಿಕ್ಷೆ, ಕೊರೋನ ನಿರ್ಬಂಧ ಉಲ್ಲಂಘಿಸಿದ್ದಕ್ಕೆ 2 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News