×
Ad

ಕಝಕಿಸ್ತಾನ: ರಾಷ್ಟ್ರೀಯ ಶೋಕಾಚರಣೆ; 8000 ಪ್ರತಿಭಟನಾಕಾರರ ಬಂಧನ

Update: 2022-01-10 23:29 IST
ಸಾಂದರ್ಭಿಕ ಚಿತ್ರ:PTI

ಅಲ್ಮಾಟಿ, ಜ.10: ಕಳೆದ ವಾರ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸುಮಾರು 8000 ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು ದೇಶದಲ್ಲಿ ಕಾನೂನು ಸುವ್ಯವಸ್ಥೆ ಮರು ಸ್ಥಾಪಿಸಲಾಗಿದೆ. ಆಕ್ರಮಣಕಾರರು ಕೈವಶ ಮಾಡಿಕೊಂಡಿದ್ದ ಸರಕಾರಿ ಕಟ್ಟಡಗಳನ್ನು ಭದ್ರತಾ ಪಡೆ ಮರುಸ್ವಾಧೀನ ಪಡಿಸಿಕೊಂಡಿದ್ದು ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕಝಕಿಸ್ತಾನದ ಆಂತರಿಕ ಸಚಿವಾಲಯ ಸೋಮವಾರ ಹೇಳಿದೆ.

2022ರ ಜನವರಿ 10ರವರೆಗಿನ ಮಾಹಿತಿ ಪ್ರಕಾರ, 7,939 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಪ್ರತಿಭಟನೆ ಸಂದರ್ಭ ಹಿಂಸಾಚಾರಕ್ಕೆ ಕಾರಣರಾದವರನ್ನು ಬಂಧಿಸುವ ಕಾರ್ಯಾಚರಣೆಗೆ ಭದ್ರತಾ ಪಡೆಯ ಹಲವು ಘಟಕಗಳನ್ನು ನಿಯೋಜಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಈ ಮಧ್ಯೆ, ಸೋಮವಾರ ಕಝಕಿಸ್ತಾನದಲ್ಲಿ ರಾಷ್ಟ್ರೀಯ ಶೋಕಾಚರಣೆ ದಿನ ಆಚರಿಸಲಾಗಿದೆ.

ಸರಕಾರಿ ಮತ್ತು ಸೇನೆಗೆ ಸಂಬಂಧಿಸಿದ ಸಂಸ್ಥೆಗಳು, ಕಚೇರಿಗಳು ಈಗ ಭದ್ರತಾ ಪಡೆಗಳ ನಿಯಂತ್ರಣದಲ್ಲಿದೆ. ದುಷ್ಕರ್ಮಿಗಳು ಅಡಗಿಕೊಂಡಿರಬಹುದಾದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹಿಂಸಾಚಾರ ಸಂಭವಿಸಿದ ಪ್ರದೇಶಗಳಲ್ಲಿ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ. ಹಿಂಸಾಚಾರಕ್ಕೆ ಭಯೋತ್ಪಾದಕರ ಗುಂಪು ಕಾರಣ ಎಂದು ಕಝಕಿಸ್ತಾನ ಸರಕಾರ ಹೇಳಿದ್ದು, ಪ್ರತಿಭಟನೆಯ ಬಗ್ಗೆ ವಿದೇಶಿ ಮಾಧ್ಯಮಗಳ ಪ್ರಸಾರವನ್ನು ಟೀಕಿಸಿದೆ.

ಸರಕಾರ ತೈಲ ಬೆಲೆಯನ್ನು ಜನವರಿ 1ರಿಂದ ಹೆಚ್ಚಿಸಿದ್ದು ಇದನ್ನು ವಿರೋಧಿಸಿ ಜನವರಿ 2ರಿಂದ ಆರಂಭಗೊಂಡಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ರಶ್ಯಾ ನೇತೃತ್ವದ ಮಿತ್ರಪಡೆಯ ನೆರವು ಕೋರಲಾಗಿತ್ತು. 2,500 ಯೋಧರ ಶಾಂತಿಪಾಲನಾ ಪಡೆ ಕಝಕಿಸ್ತಾನದಲ್ಲಿದ್ದು ಕಾನೂನು ಸುವ್ಯವಸ್ಥೆಗೆ ಸರಕಾರಕ್ಕೆ ನೆರವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News