ಭಾರತದಲ್ಲಿನ ಅಲ್ಪಸಂಖ್ಯಾತರಿಗೆ ತೀವ್ರವಾದಿ ಗುಂಪುಗಳಿಂದ ಬೆದರಿಕೆ: ಇಮ್ರಾನ್ ಖಾನ್ ಆರೋಪ

Update: 2022-01-10 18:04 GMT
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಇಸ್ಲಮಾಬಾದ್, ಜ.10: ಭಾರತದಲ್ಲಿ ಅಲ್ಪಸಂಖ್ಯಾತರನ್ನು ತೀವ್ರವಾದಿ ಗುಂಪುಗಳು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಇಂತಹ ಕಾರ್ಯಸೂಚಿಯು ಪ್ರಾದೇಶಿಕ ಶಾಂತಿಗೆ ನೈಜ ಮತ್ತು ಪ್ರತ್ಯಕ್ಷ ಬೆದರಿಕೆಯಾಗಿದೆ ಎಂದು ಎಚ್ಚರಿಸಿದ್ದಾರೆ.

ಡಿಸೆಂಬರ್ ನಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಲಾಗಿದೆ ಎಂಬ ವರದಿಯ ಬಗ್ಗೆ ಅವರು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ಭಾರತದಲ್ಲಿನ ಅಲ್ಪಸಂಖ್ಯಾತರ, ವಿಶೇಷವಾಗಿ 200 ಮಿಲಿಯನ್ ಮುಸ್ಲಿಮ್ ಜನಾಂಗದವರ ಹತ್ಯೆಗೆ ನೀಡಿದ ಕರೆಯನ್ನು ಬಿಜೆಪಿ ಸರಕಾರ ಬೆಂಬಲಿುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಅಂತರಾಷ್ಟ್ರೀಯ ಸಮುದಾಯ ಇಂತಹ ಪ್ರಕರಣಗಳನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಲು ಇದು ಸಕಾಲವಾಗಿದೆ. ಭಾರತದಲ್ಲಿನ ಬಿಜೆಪಿ ನೇತೃತ್ವದ ಸರಕಾರ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ. ತೀವ್ರವಾದಿ ಕಾರ್ಯಸೂಚಿ ನಮ್ಮ ವಲಯಕ್ಕೆ ಎದುರಾಗಿರುವ ನೈಜ ಮತ್ತು ಪ್ರಸ್ತುತ ಬೆದರಿಕೆಯಾಗಿದೆ ಎಂದವರು ಹೇಳಿದ್ದಾರೆ.

ಹರಿದ್ವಾರ ಸಮಾವೇಶದಲ್ಲಿ ದ್ವೇಷ ಭಾಷಣ ಮಾಡಿರುವ ವರದಿಯ ಹಿನ್ನೆಲೆಯಲ್ಲಿ ಕಳೆದ ತಿಂಗಳು ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿಕೊಂಡಿದ್ದ ಪಾಕಿಸ್ತಾನದ ವಿದೇಶ ಇಲಾಖೆ, ಈ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News