ಚೀನಾಕ್ಕೆ ಅಫ್ಘಾನ್ ನ ರಾಯಭಾರಿ ರಾಜೀನಾಮೆ

Update: 2022-01-10 18:34 GMT

photo:twitter@JavidQaem
 

ಬೀಜಿಂಗ್, ಜ.10: ಚೀನಾಕ್ಕೆ ಅಫ್ಘಾನಿಸ್ತಾನದ ರಾಯಭಾರಿ ಜಾವಿದ್ ಅಹ್ಮದ್ ಖಯೀಂ ಸೋಮವಾರ ರಾಜೀನಾಮೆ ಸಲ್ಲಿಸಿದ್ದು, ತನ್ನ ಉತ್ತರಾಧಿಕಾರಿಯನ್ನು ಉಲ್ಲೇಖಿಸಿ ಬರೆದಿರುವ ರಾಜೀನಾಮೆ ಟಿಪ್ಪಣಿಯಲ್ಲಿ ಕೆಲವು ಗಮನಾರ್ಹ ವಿಷಯಗಳನ್ನು ಬರೆದಿರುವುದಾಗಿ ಟ್ವೀಟ್ ಮಾಡಿದ್ದಾರೆ.

ರಾಯಭಾರ ಕಚೇರಿಯ ಸಿಬ್ಬಂದಿಗೆ ಹಲವು ತಿಂಗಳಿಂದ ವೇತನ ಪಾವತಿಯಾಗಿಲ್ಲ ಮತ್ತು ಫೋನ್ ಕರೆಗಳಿಗೆ ಉತ್ತರಿಸಲು ಒಬ್ಬರು ಸ್ವಾಗತಕಾರರು ಮಾತ್ರ ಇದ್ದಾರೆ. ರಾಯಭಾರ ಕಚೇರಿಯ ಬ್ಯಾಂಕ್ ಖಾತೆಯಿಂದ ಕಷ್ಟಪಟ್ಟು ಹಣ ಹೊಂದಿಸಿ ಸಿಬಂದಿಗೆ ವೇತನ ಪಾವತಿಸಲು ಪ್ರಯತ್ನಿಸಿದ್ದೇವೆ. ಆದರೂ, ಈಗ ರಾಯಭಾರ ಕಚೇರಿಯ ಬ್ಯಾಂಕ್ ಖಾತೆಯಲ್ಲಿ ಸುಮಾರು 1 ಲಕ್ಷ ಡಾಲರ್ ಹಣ ಜಮೆಯಾಗಿರುವಂತೆ ನೋಡಿಕೊಂಡಿದ್ದೇನೆ ಎಂದು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಅಫ್ಘಾನಿಸ್ತಾನವು ತಾಲಿಬಾನ್ ನಿಯಂತ್ರಣಕ್ಕೆ ಬಂದ ನಂತರ ಕಳೆದ 6 ತಿಂಗಳಿಂದ ನಮಗೆ ವೇತನ ಬಾಕಿಯಾಗಿದೆ. ನಂತರ ನಾವು ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಾವು ರಾಜತಾಂತ್ರಿಕರನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದೇವೆ ಎಂದು ಅಫ್ಘಾನ್‌ನ ವಿದೇಶ ವ್ಯವಹಾರ ಸಚಿವಾಲಯಕ್ಕೆ ಬರೆದಿರುವ ಜನವರಿ 1ರ ದಿನಾಂಕ ಹೊಂದಿರುವ ಪತ್ರವನ್ನು ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಕಚೇರಿಯ 5 ಕಾರುಗಳ ಕೀಗಳನ್ನು ತನ್ನ ಕಚೇರಿಯಲ್ಲಿ ಇರಿಸಿದ್ದೇನೆ. ಕಚೇರಿಯ ಇತರ ಎಲ್ಲಾ ರಾಜತಾಂತ್ರಿಕ ಸಿಬ್ಬಂದಿ ಕೆಲಸ ತೊರೆದಿರುವುದರಿಂದ ಏಕೈಕ ಸ್ಥಳೀಯ ಸಿಬ್ಬಂದಿಗೆ ಫೋನ್ ಕರೆಗೆ ಉತ್ತರಿಸುವ ಜವಾಬ್ದಾರಿ ವಹಿಸಿ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಗೌರವಾನ್ವಿತ ಜವಾಬ್ದಾರಿಯ ಅಂತ್ಯ’  ಎಂದು ಮತ್ತೊಂದು ಟ್ವೀಟ್ ಮಾಡಿರುವ ಖಯೀಂ, ನನ್ನ ಹುದ್ದೆಗೆ ಹೊಸದಾಗಿ ನಿಯೋಜನೆಗೊಂಡಿರುವ ಮಿ.ಸಾದಾತ್ ಅವರು ಬೀಜಿಂಗ್‌ಗೆ ಆಗಮಿಸಿದಾಗ ರಾಯಭಾರ ಕಚೇರಿಯಲ್ಲಿ ಇತರ ಯಾವುದೇ ರಾಜತಾಂತ್ರಿಕ ಸಿಬ್ಬಂದಿಗಳಿರುವುದಿಲ್ಲ ಎಂದು ನನ್ನ ಭಾವನೆ. ರಾಜೀನಾಮೆ ಬಗ್ಗೆ ಚೀನಾಕ್ಕೆ ಮೊದಲೇ ತಿಳಿಸಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಈ ಮಧ್ಯೆ, ಚೀನಾದಲ್ಲಿನ ಅಫ್ಘಾನ್ ರಾಯಭಾರ ಕಚೇರಿ ಸೋಮವಾರ ಎಂದಿನಂತೆ ತೆರೆದಿತ್ತು ಮತ್ತು ಕಚೇರಿಯ ಎದುರು ಇಬ್ಬರು ಭದ್ರತಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News